Site icon Vistara News

Yadgiri News: ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

BJP protests demanding action against those accused of shouting pro-Pak slogans

ಯಾದಗಿರಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬುಧವಾರ ನಗರದಲ್ಲಿ (Yadgiri News) ಪ್ರತಿಭಟನೆ ನಡೆಸಿದರು.

ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ದೇಶ ದ್ರೋಹಿಗಳಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

ಈ ವೇಳೆ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಪ್ರಜಾಪ್ರಭುತ್ವ ದೇಗುಲವೆಂದು ಕರೆಸಿಕೊಳ್ಳುವ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನೋವಿನ ಸಂಗತಿಯಾಗಿದೆ. ಸೈಯದ್ ನಾಸೀರ್ ಹುಸೇನ್ ಅವರು ನೂತನವಾಗಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಕೆಲ ಕ್ಷಣದಲ್ಲಿಯೇ ಅವರ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಕಾರ್ಯ ಮಾಡಿದ್ದಾರೆ. ರಾಜ್ಯ ಸರ್ಕಾರ ದೇಶದ್ರೋಹಿಗಳನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದೆ ಎಂದು ಆರೋಪಿಸಿದ ಅವರು, ವಿಧಾನಸೌಧದಲ್ಲಿಯೇ ಪಾಕ್ ಪರ ಘೋಷಣೆ ಕೂಗಿರುವ ಆರೋಪಿಗಳಿಗೆ ಬಂಧನ ಮಾಡದಿದ್ದರೆ ಇನ್ನೂ ಹೊರಗಡೆ ತಪ್ಪು ಮಾಡಿದವರಿಗೆ ಯಾವ ರೀತಿ ರಕ್ಷಣೆ ಮಾಡಲಿದ್ದಾರೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಪ್ರಶ್ನೆ ಮಾಡಿರುವ ಮಾಧ್ಯಮದವರಿಗೆ ರಾಜ್ಯಸಭೆ ಸದಸ್ಯ ನಿಂದನೆ ಮಾಡಿರುವ ಕ್ರಮ ಸರಿಯಲ್ಲ.

ಆರೋಪಿಯು ಹೇಗೆ ಓಡಿ ಹೋದ? ಇಂತಹ ಹೇಳಿಕೆಯು ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಕೂಡಲೇ ಬಂಧನ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ನಂತರ ಬಿಜೆಪಿ ಮುಖಂಡ ಡಾ. ಶರಣಭೂಪಾಲ ರೆಡ್ಡಿ ನಾಯ್ಕಲ್ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿದ್ದು ಇಡೀ ದೇಶದ ಜನತೆ ನೋಡಿದೆ. ಕಾಂಗ್ರೆಸ್ ಕಾರ್ಯಕರ್ತರು ಯಾವ ರೀತಿ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಕೆ ರಾಜಕೀಯ ಮಾಡುತ್ತಿದೆ. ವಿಧಾನಸೌಧದಲ್ಲಿ ದೇಶದ್ರೋಹಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ. ಸರ್ಕಾರ ಇಂತಹ ಆರೋಪಿಗಳು ಓಡಿ ಹೋಗಲು ಸಹಾಯ ಮಾಡಿದೆ ಎಂದು ಆರೋಪಿಸಿದ ಅವರು, ಕೂಡಲೇ ಸರ್ಕಾರ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಒಳಗಿನ ಖಾಸಗಿ ಲ್ಯಾಬ್‌ ಬಂದ್‌; ಸರ್ಕಾರದ ಖಡಕ್‌ ಆದೇಶ!

ಪ್ರತಿಭಟನೆಯಲ್ಲಿ ಮುಖಂಡರಾದ ವೆಂಕಟರಡ್ಡಿ ಅಬ್ಬೆತುಮಕೂರ, ಖಂಡಪ್ಪ ದಾಸನ, ಸಿದ್ದಣ್ಣಗೌಡ ಕಾಡಂನೋರ್, ಮಂಜುನಾಥ ಜಡಿ, ರಾಜಶೇಖರ ಕಾಡಂನೋರ್, ಮಲ್ಲಿಕಾರ್ಜುನ ಹೊನಗೇರಾ, ಗೋವಿಂದಪ್ಪ ಖಾನಾಪುರ, ಮಲ್ಲು ಕೋಳಿವಾಡ, ಮೌನೇಶ ಬೆಳಗೇರಿ, ಮಂಜುನಾಥ್ ಗುತ್ತೇದಾರ, ಶ್ರೀಧರ್ ರಾಯಚೂರು, ಶರಣುಗೌಡ, ರಮೇಶ್ ದೊಡ್ಡಮನಿ, ಬಸವರಾಜ ಬಳಿಚಕ್ರ, ವೀಣಾ ಮೋದಿ, ಸುನೀತಾ ಚವ್ಹಾಣ, ಸ್ನೇಹಾ ರಸಾಳಕರ್, ಭೀಮಬಾಯಿ ಸೆಂಡಗಿ, ಶಕುಂತಲಾ, ಚಂದ್ರು ಅರಕೇರಾ, ಶರಣು ಹತ್ತಿಕುಣಿ, ಅಯ್ಯಪ್ಪ ಪೂಜಾರಿ, ವೆಂಕಟೇಶ್ ಯಾಧವ್, ಚಂದ್ರಶೇಖರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version