Site icon Vistara News

Yadgiri News: ಚುನಾವಣಾ ಅಕ್ರಮ ತಡೆಗೆ ಸಿ ವಿಜಿಲ್ ಆ್ಯಪ್: ಜಿಲ್ಲಾಧಿಕಾರಿ

Yadgiri DC Dr. Sushila B

ಯಾದಗಿರಿ: ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಚುನಾವಣಾ ಆಯೋಗವು (Election Commission) ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ತಡೆಗೆ ಸಿ ವಿಜಿಲ್ ಆ್ಯಪ್‌ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. (Yadgiri News) ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಹಾಕುವಂತೆ ಆಮಿಷಗಳನ್ನು ಒಡ್ಡಿದರೆ, ಮತದಾರರು ಸಿ ವಿಜಿಲ್ ಆ್ಯಪ್‌ ಮೂಲಕ ದೂರು ನೀಡಬಹುದು. ಬಂದೂಕು ತೋರಿಸಿ ಬೆದರಿಕೆ ಹಾಕುವುದು, ಆಸ್ತಿ ವಿರೂಪಗೊಳಿಸುವುದು, ಧಾರ್ಮಿಕ ಅಥವಾ ಕೋಮು ಪ್ರಚೋದಿತ ಭಾಷಣ ಮಾಡಿದರೂ ಆ್ಯಪ್ ಮೂಲಕ ದೂರು ನೀಡಬಹುದು.

ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧವಿದ್ದರೂ ಪ್ರಚಾರ ಮಾಡುವುದು, ಮತದಾನದ ದಿನ ವಾಹನಗಳಲ್ಲಿ ಮತದಾರರನ್ನು ಕರೆತಂದು ಪ್ರಲೋಭನೆಗೊಳಿಸುವುದು, ಮತ ಹಾಕುವಂತೆ ಬೆದರಿಸುವುದು ಹಾಗೂ ನೀತಿ ಸಂಹಿತೆ ಪ್ರಕರಣಗಳು ಕಂಡುಬಂದರೂ ಸಿ ವಿಜಿಲ್ ಆ್ಯಪ್‌ನಲ್ಲಿ ದೂರು ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: Karnataka Weather : ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ ಸೂಚನೆ!

ಸಿ ವಿಜಿಲ್ ಮೂಲಕ ಸಲ್ಲಿಕೆಯಾಗುವ ದೂರುಗಳಿಂದ ಘಟನೆ ನಡೆದ ಸ್ಥಳದ ಮಾಹಿತಿ ಲಭ್ಯವಾಗುವುದರಿಂದ ಪ್ರಕರಣ ನಡೆದ ಸ್ಥಳಕ್ಕೆ ಅಧಿಕಾರಿಗಳು ತಲುಪಬಹುದು.

ಸಾರ್ವಜನಿಕರು ಪ್ಲೇ ಸ್ಟೋರ್‌ನಲ್ಲಿ ಸಿ ವಿಜಿಲ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಅಕ್ರಮಗಳ ಕುರಿತು ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

ಸಿ ವಿಜಿಲ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕಚೇರಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಮತದಾನ ಮುಕ್ತಾಯವಾಗುವರೆಗೂ 3 ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೂರು ದಾಖಲಾದ ಕೂಡಲೇ ಪರಿಶೀಲಿಸಿ ದೂರು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ಲೈಯಿಂಗ್ ಸ್ಕ್ವಾಡ್‌ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ರವಾನಿಸಿ ದೂರಿನ ಕುರಿತು ತುರ್ತು ಕ್ರಮ ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಗರಿಷ್ಠ 100 ನಿಮಿಷಗಳ ಒಳಗೆ ದೂರುಗಳನ್ನು ಇತ್ಯರ್ಥಪಡಿಸಲಾಗುತ್ತದೆ.

ಇದನ್ನೂ ಓದಿ: Money Guide: ಗಮನಿಸಿ; ಈ ಮಾಸಾಂತ್ಯದೊಳಗೆ ಮುಗಿಸಲೇಬೇಕಾದ ಕೆಲಸಗಳಿವು…

ಸಾರ್ವಜನಿಕರು ಸಿ ವಿಜಿಲ್ ಆ್ಯಪ್‌ ಮಾತ್ರವಲ್ಲದೆ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಕರೆಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು. ಈ ಮೂಲಕ ಮುಕ್ತ , ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version