Site icon Vistara News

Yadgiri News: ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ತಾಲೂಕು ಮಟ್ಟದಲ್ಲಿ ‌ಕಂಟ್ರೋಲ್ ರೂಮ್ ತೆರೆಯಲು ಡಿಸಿ ಸೂಚನೆ

DC instructs to open control room at taluk level to respond to drinking water problem

ಯಾದಗಿರಿ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ (Drinking Water) ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ‌ಕಂಟ್ರೋಲ್ ರೂಂ ತೆರೆದು ಸಾರ್ವಜನಿಕ ಸಮಸ್ಯೆಗಳನ್ನು ತಮ್ಮ ಮನೆಯ ಸಮಸ್ಯೆಗಳೆಂದು ಭಾವಿಸಿ ಅಧಿಕಾರಿಗಳು ಸ್ಪಂದಿಸಿ, ಬರ ಎದುರಿಸಲು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. (Yadgiri News) ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ನಿಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಕಂಡು ಬಂದಾಗ ಸಂಬಂಧಿಸಿದ ಅಧಿಕಾರಿಗಳು ಗೈರಾಗಿದ್ದರೆ ಅದಕ್ಕೆ ಅವರೇ ನೇರ ಹೊಣೆಗಾರರನ್ನಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

ಜಿಲ್ಲೆಯ ಆರು ತಾಲೂಕುಗಳನ್ನು ಸರ್ಕಾರವು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳು ಆಯಾ ಗ್ರಾಮಗಳ ಜನರನ್ನು ಸಂಪರ್ಕಿಸಿ ನೀರಿನ ಸಮಸ್ಯೆ ಪರಿಹರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು, ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಯಾಗುತ್ತೀರಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗ್ರಾಮವಾರು ಜನರಿಗೆ ಕುಡಿಯುವ ನೀರು ದಿನನಿತ್ಯ ಲಭ್ಯವಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತಂತೆ ಆಯಾ ಗ್ರಾಮ ಪಂಚಾಯಿತಿ ಮೂಲಕ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದರು.

ಇದನ್ನೂ ಓದಿ: Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

ಜಿಲ್ಲೆಯಲ್ಲಿ ಆರ್ಸೆನಿಕ್, ಪ್ಲೋರೋಸಿಸ್ ಪ್ರದೇಶಗಳನ್ನು ಗುರುತಿಸಿ ಜನರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಕುಡಿಯುವ ನೀರಿಗೆ ಚರಂಡಿ ನೀರು ಸೇರಿ ಕಲುಷಿತಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬಾಕಿ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ವಿಶೇಷ ಗಮನ ಹರಿಸಬೇಕು. ಕುಡಿಯುವ ನೀರಿನ ಮೂಲಗಳ ಬೋರ್‌ವೆಲ್, ಪ್ಲೇಸಿಂಗ್ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ನಗರಸಭೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಕುಡಿಯುವ ನೀರು ಪೂರೈಕೆ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Boar Attack : ಹಂದಿಗಳ ಕಾಟಕ್ಕೆ ಮನೆ ಬಿಟ್ಟು ಹೋದ್ರು ಹೆಂಡ್ತಿ-ಮಕ್ಕಳು!

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ತಾ.ಪಂ. ಇಒ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version