Site icon Vistara News

Yadgiri News: ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಹಬ್ಬಕ್ಕೆ ಚಾಲನೆ

District Level millets and Organic Festival in Yadgiri

ಯಾದಗಿರಿ: ಜಿಲ್ಲೆಯ ಶಹಾಪುರದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಿರಿಧಾನ್ಯ (Millets) ಮತ್ತು ಸಾವಯವ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ, ಆತ್ಮ ಯೋಜನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚಾಗಿದೆ. ಇತರೆ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಬೆಳೆಗಳಿಗೆ ಕಡಿಮೆ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರಿತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ಸಿರಿಧಾನ್ಯಗಳ ಸಸಿಗಳು ಹೊಂದಿವೆ. ಇವು ಇತರೆ ಬೆಳೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿವೆ ಎಂದರು.

ಸರ್ಕಾರವು ಸಿರಿಧಾನ್ಯಗಳ ಕೃಷಿಗೆ ಮತ್ತು ಬಳಕೆಗೆ ಒತ್ತು ನೀಡುವ ಹೆಜ್ಜೆಗಳನ್ನು ಇಟ್ಟಿದ್ದು, ಕೃಷಿಕರು ಮತ್ತು ಗ್ರಾಹಕರು ಸರ್ಕಾರದ ಜತೆಗೆ ಕೈ ಜೋಡಿಸಿ ನಮ್ಮ ಮತ್ತು ಮುಂದಿನ ಪೀಳಿಗೆಗಳ ಹಿತಕ್ಕಾಗಿ ಸಿರಿಧಾನ್ಯ ಬೆಳೆಯುವ ಮತ್ತು ಬಳಕೆ ಮಾಡುವ ಮೂಲಕ ನಮ್ಮ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಬೇಕಾದ ಸಮಯ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: Bengaluru Film Festival: ಫೆ.29 ರಿಂದ ಮಾ.7 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಮಾತನಾಡಿ, ನಮ್ಮ ಹಿರಿಯರು ಸಾಂಪ್ರದಾಯಿಕ ಬರಗು, ನವಣೆ, ಸಾವೆ, ಅರಕ, ಸಾಮೆ, ರಾಗಿ, ಸಜ್ಜೆ ಮತ್ತು ಜೋಳ ಸೇರಿದಂತೆ ಇನ್ನಿತರ ಸಿರಿಧಾನ್ಯಗಳನ್ನು ಬೆಳೆದು ಸೇವಿಸಿದ ಪರಿಣಾಮ ಅವರ ಆರೋಗ್ಯ ಮತ್ತು ಆಯುಷ್ಯವು ಉನ್ನತ ಮಟ್ಟದಲ್ಲಿತ್ತು. ನಮಗೆ ನಿಜವಾದ ಆಸ್ತಿಯೇ ಉತ್ತಮವಾದ ಆರೋಗ್ಯವಾಗಿದೆ. ನಮಗೆ ಉತ್ತಮವಾದ ಔಷಧಗಳೇ ಅಡುಗೆ ಮನೆಯ ಸಿರಿಧಾನ್ಯಗಳಾಗಿವೆ. ಪ್ರಸ್ತುತ ನಾವು ಅವುಗಳ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಅರಿತು ಸೇವಿಸುವ ಜತೆಗೆ ಪ್ರಚಾರಗೊಳಿಸಿ ಆರೋಗ್ಯಪೂರ್ಣ ಸಮಾಜ ಕಟ್ಟಬೇಕಿದೆ ಎಂದರು.

ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆ ಉತ್ತಮ ಆರೋಗ್ಯವೇ ನಮ್ಮ ಆಸ್ತಿ ಎಂಬ ಮನೋಭಾವ ಇಟ್ಟುಕೊಂಡು ಆಹಾರ ಸೇವನೆ ಮಾಡಬೇಕಿದೆ. ಆ ಉದ್ದೇಶದಿಂದ ನಮ್ಮ ನಡೆ ಸಿರಿಧಾನ್ಯಗಳ ಕಡೆ ಎಂಬ ಘೋಷಣೆಯೊಂದಿಗೆ ಸಿರಿಧಾನ್ಯಗಳ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಮಾತನಾಡಿದರು.

ಇದೇ ವೇಳೆ ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆಯ್ದ ರೈತ ಫಲಾನುಭವಿಗಳಿಗೆ ಕೃಷಿ ಸಾಮಾಗ್ರಿಗಳನ್ನು ವಿತರಿಸಿದರು.

ಇದನ್ನೂ ಓದಿ: WhatsApp: 71 ಲಕ್ಷ ಭಾರತೀಯ ಖಾತೆಗಳನ್ನು ಡಿಲಿಟ್ ಮಾಡಿದ ವಾಟ್ಸಾಪ್!

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ, ಮಲ್ಲಿಕಾರ್ಜುನ ಡಿ., ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ ಗೌಡಪ್ಪ, ಕದವಡಿಮಟ್ಟಿ ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿ ಡಾ. ಜಯಪ್ರಕಾಶ್ ನಾರಾಯಣ್, ಭೀಮರಾಯನಗುಡಿ ಕೃಷಿ ವಿದ್ಯಾಲಯದ ಡೀನ್ ಡಾ. ಪ್ರಕಾಶ್ ಕುಚನೂರು, ಡಾ.ಪಾಲಯ್ಯ, ಭೀಮರಾಯಗುಡಿ ಕೃಷಿ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಶ್ಯಾಮರಾವ ಕುಲಕರ್ಣಿ, ಜಂಟಿ ಕೃಷಿ ನಿರ್ದೇಶಕಿ ಮಂಜುಳಾ ಬಸರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version