ಯಾದಗಿರಿ: ನಗರದ ವಸತಿರಹಿತರ ಆಶ್ರಯ ಕೇಂದ್ರದಲ್ಲಿ (Shelter Center) ಮಂಗಳವಾರ ವಿಶ್ವ ವಸತಿ ರಹಿತರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ( ಡೇ- ನಲ್ಮಾ) ಅಭಿಯಾನದಡಿಯಲ್ಲಿ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಪೌರಾಯುಕ್ತ ಲಕ್ಷ್ಮೀಕಾಂತ ಅವರು, ಸಸಿಗಳನ್ನು ನೆಟ್ಟು ಹಾಗೂ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ವಸತಿ ರಹಿತರಿಗೆ ಇರುವ ಉಚಿತ ಆಶ್ರಯ ಕೇಂದ್ರವು ನಿರಾಶ್ರಿತರಿಗೆ ಬಹಳ ಅನುಕೂಲವಾಗಿದ್ದು ಶ್ಲಾಘನೀಯ ಎಂದು ತಿಳಿಸಿದರು.
ಇದನ್ನೂ ಓದಿ: VIjayanagara News: ಹೊಸಪೇಟೆಯಲ್ಲಿ ಅ.12, 13ರಂದು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಮಾವೇಶ
ದೇಶ ಹಾಗೂ ರಾಜ್ಯದಲ್ಲಿ ಅದೆಷ್ಟೋ ಜನರು ವಾಸ ಮಾಡೋಕೆ ಮನೆಯೂ ಇಲ್ಲದೇ, ನೆಮ್ಮದಿಯ ನಿದ್ರೆಗೆ ಸೂರು ಇಲ್ಲದೆ ಬದುಕುತ್ತಿದ್ದಾರೆ. ಅಂತಹ ವಸತಿರಹಿತ ನಿರಾಶ್ರಿತರಿಗೆ ಆಶ್ರಯ ನೀಡೋ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇಂತಹ ನಿರಾಶ್ರಿತರ ರಕ್ಷಣೆ ನಮ್ಮ ಕರ್ತವ್ಯ ಆಗಿದೆ ಎಂದರು.
ಆಶ್ರಯ ಇಲ್ಲದವರು ಫುಟ್ಪಾತ್ ಮೇಲೆ ರಾತ್ರಿ ಕಳೆಯುವ ದೃಶ್ಯ ನಿತ್ಯವೂ ಕಾಣಿಸುತ್ತದೆ. ಈ ವರ್ಗದ ಕಾರ್ವಿುಕರ ಅನುಕೂಲಕ್ಕಾಗಿ ನಗರ ವಸತಿರಹಿತರ ಆಶ್ರಯ ಕೇಂದ್ರವನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.
ಯಾದಗಿರಿ ನಗರ ಠಾಣೆಯ ಪಿಎಸ್ಐ ಪರಶುರಾಮ ಮಾತನಾಡಿ, ಕೆಲಸದ ನಿಮಿತ್ತ ಹಾಗೂ ಕೆಲಸ ಅರಸಿ ನಿತ್ಯ ನಗರಕ್ಕೆ ಆಗಮಿಸುವವರಲ್ಲಿ ಬಹಳಷ್ಟು ಜನರಿಗೆ ನಗರದಲ್ಲಿ ನೆಲೆ ಇರುವುದಿಲ್ಲ. ನಿತ್ಯ ಲಾಡ್ಜ್‌ನಲ್ಲಿ ಉಳಿಯುವುದು ವೆಚ್ಚದಾಯಕ. ಹಾಗಾಗಿ ಎಷ್ಟೋ ಬಡ ಜನರು ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಫುಟ್ಪಾತ್ ಮೇಲೆ ರಾತ್ರಿ ಕಳೆಯುತ್ತಾರೆ. ಇಂಥವರಿಗೆ ನಗರ ವಸತಿ ರಹಿತರ ಆಶ್ರಯ ಕೇಂದ್ರ ಒಂದಿಷ್ಟು ದಿನ ನೆಲೆ ಒದಗಿಸಲಿರುವುದು ಶ್ಲಾಘನೀಯ ಎಂದರು. ಇದರ ಸದುಪಯೋಗ ಪಡೆದು ಜನರು ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Badminton : ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಅಮೋಘ ದಾಖಲೆ ಮಾಡಿದ ಸಾತ್ವಿಕ್- ಚಿರಾಗ್ ಶೆಟ್ಟಿ
ಈ ಸಂದರ್ಭದಲ್ಲಿ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಮೌನೇಶ ಇಟಗಿ, ಕೇರ್ ಟೇಕರಗಳಾದ ಧರ್ಮಣ್ಣ, ಭೀಮು ಕೋರಿ, ಸೇವಕರಾದ ಭೀರಲಿಂಗಪ್ಪ ಕಿಲ್ಲನಕೇರಾ, ನಗರಸಭೆ ಸಿಬ್ಬಂದಿ ವರ್ಗದವರು ಮತ್ತು ನಿರಾಶ್ರಿತರು ಉಪಸ್ಥಿತರಿದ್ದರು.