Site icon Vistara News

Yadgiri News: ಬರ ಪರಿಹಾರದ ಹಣ ರೈತರ ಸಾಲಕ್ಕೆ ಜಮಾ ಮಾಡಿಕೊಂಡರೆ ಕಾನೂನು ಕ್ರಮ: ಡಿಸಿ

Legal action if drought relief money is credited to farmers loans says Dr Sushila

ಯಾದಗಿರಿ: ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ (Drought) ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೇ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಖಡಕ್ ಸೂಚನೆ (Yadgiri News) ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ರೈತರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಏನಾದರೂ ತಾಂತ್ರಿಕ ದೋಷಗಳಿದ್ದರೆ ತಿಳುವಳಿಕೆ ಮೂಡಿಸಿ ಇತ್ಯರ್ಥ ಪಡಿಸಬೇಕು. ಬ್ಯಾಂಕುಗಳ ವಿರುದ್ಧ ಸಾರ್ವಜನಿಕರಿಂದ ದೂರು ಬರದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಯಾದಗಿರಿ ಜಿಲ್ಲೆಯನ್ನು 2023-24 ನೇ ಸಾಲಿನಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅದರಂತೆ ಸರ್ಕಾರದಿಂದ ಬರ ಪರಿಹಾರದ ಮೊತ್ತವನ್ನು ರೈತರಿಗೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದ್ದು, ಆದರೆ ಕೆಲ ರೈತರು ಬ್ಯಾಂಕ್ ಅಧಿಕಾರಿಗಳು ಸದರಿ ಪರಿಹಾರದ ಮೊತ್ತವನ್ನು ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಅವಕಾಶ ಕೊಡಬಾರದು.

ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಡಿ ಸಂದಾಯವಾಗುವ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡುವಂತಿಲ್ಲ ಎಂದು ಸ್ಪಷ್ಟವಾದ ಸರ್ಕಾರದ ನಿರ್ದೇಶನವಿರುತ್ತದೆ. ಈ ರೀತಿ ಮಾಡಿದಲ್ಲಿ ತಾವುಗಳು ಸರ್ಕಾರದ ನಿರ್ದೇಶನ ಉಲ್ಲಂಘಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ತಪ್ಪು ಮಾಡುವ ಬ್ಯಾಂಕ್‌ಗಳ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡೇ-ನಲ್ಮ್‌ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ನೋಂದಣಿ ಪ್ರಮಾಣ ಪತ್ರ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಸ್ವ- ಸಹಾಯ ಸಂಘಗಳ ಖಾತೆ ತೆರೆಯಲು ಅವಕಾಶ ಕಲ್ಪಿಸಿ ಕೊಡುವಂತೆ ನಿರ್ದೇಶಿಸಿದರು.

ಪಿ.ಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲ ನೀಡುವಾಗ ಫಲಾನುಭವಿಗಳಿಗೆ ಯಾವುದೇ ಸ್ಟ್ಯಾಂಪ್ ಶುಲ್ಕ ವಿಧಿಸತಕ್ಕದ್ದಲ್ಲ ಎಂದು ಇದೇ ವೇಳೆ ಸೂಚಿಸಿದರು.

ಇದನ್ನೂ ಓದಿ: Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ, ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಎಸ್‌ಬಿಐ ಪ್ರಾದೇಶಿಕ ಕಛೇರಿಯ ಮುಖ್ಯ ವ್ಯವಸ್ಥಾಪಕ ಲೋಯಿಸ್ ಸಿ.ಎಂ, ಕೆ.ಜಿ.ಬಿ ಕರ್ನಾಟಕ ಗ್ರಾಮೀಣ ಪ್ರಾದೇಶಿಕ ವ್ಯವಸ್ಥಾಪಕ ಗುರುಪ್ರಸಾದ್ ಸ್ವಾಮಿ, ಕೆ.ಜಿ.ಬಿ ಕರ್ನಾಟಕ ರಿಜಿನಲ್ ಆಫೀಸರ್ (ಸಿ.ಎಂ. ಕ್ರೆಡಿಟ್) ಸುಬೇದಾರ್, ಲೀಡ್ ಬ್ಯಾಂಕ್‌ನ ಸಿಬ್ಬಂದಿಗಳಾದ ಕುಮಾರಸ್ವಾಮಿ, ಅಮೀರ್ ಪಟೇಲ್ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version