Site icon Vistara News

Yadgiri News: ಯಾದಗಿರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲಿಂ.ವಿಶ್ವನಾಥರಡ್ಡಿ ಕಂಚಿನ ಪುತ್ಥಳಿ‌ ಅನಾವರಣ

lingaikya vishwanatharaddi mudnala bronze statue unveiled at yadgiri

ಯಾದಗಿರಿ: ಸಮಕಾಲೀನ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಸಚಿವರಾಗಿದ್ದ ಲಿಂ.ವಿಶ್ವನಾಥರಡ್ಡಿ ಮುದ್ನಾಳ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Yadgiri News) ಬಣ್ಣಿಸಿದರು.

ಮುದ್ನಾಳ ಅಭಿಮಾನಿಗಳ ಬಳಗದಿಂದ ಶುಕ್ರವಾರ ನಗರದ ಜಿಲ್ಲಾಡಳಿತ ಭವನದ‌ ಸಮೀಪ ನಿರ್ಮಿಸಿರುವ ಲಿಂ.ವಿಶ್ವನಾಥರಡ್ಡಿ ಮುದ್ನಾಳರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಅಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಚುನಾವಣೆ ಮಾಡಬೇಕಾದರೆ ಹಣ ಮುಖ್ಯವಾಗಿರಲಿಲ್ಲ.‌ ವ್ಯಕ್ತಿತ್ವ ಮುಖ್ಯವಾಗಿತ್ತು. ಮುದ್ನಾಳ ಅವರು, ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather : ಬಿಸಿಲ ಧಗೆ ಹೆಚ್ಚಳ; ರಾಯಚೂರಲ್ಲಿ ತಾಪಮಾನ ಏರಿಕೆ, ಬೆಳಗಾವಿಯಲ್ಲಿ ಇಳಿಕೆ

ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 (ಜೆ) ಕಲಂ ತಿದ್ದುಪಡಿಗಾಗಿ ಮೊದಲ ಹೋರಾಟಕ್ಕೆ ಅಣಿಯಾದವರೇ ವಿಶ್ವನಾಥರಡ್ಡಿ ಅವರು. ಬೆಂಗಳೂರಿನಲ್ಲಿ ವೀರಶೈವ ಮಹಾಸಭೆ ಕಚೇರಿ ನಿರ್ಮಾಣಕ್ಕೆ ನಿವೇಶನ ಒದಗಿಸಲು ಇಡೀ ನಾಡು ಸುತ್ತಾಡಿ ದೇಣಿಗೆ ಸಂಗ್ರಹಿಸಿದ್ದರು. ಬಸವ ಸಮಿತಿ ಹುಟ್ಟು ಹಾಕಿ ಅದರ ನೇತೃತ್ವ ವಹಿಸಿ, ಬಸವ ತತ್ವದ ಬಗ್ಗೆ ಪ್ರಚಾರ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿದರು.

ಬಾಳೆಹೊನ್ನೂರಿನ ರಂಭಾಪುರಿಯ ಜಗದ್ಗುರು ಶ್ರೀ ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಸಹನೆಯಿಂದ ಇರಬೇಕು. ಸಹನೆ ಹಾಗೂ ವಿನಯತೆಯಿಂದ ಇದ್ದರೆ ಜೀವನದಲ್ಲಿ ಸಾಧಿಸಬಹುದು ಎಂದ ಶ್ರೀಗಳು, ಲಿಂ.ವಿಶ್ವನಾಥರೆಡ್ಡಿ ಮುದ್ನಾಳ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಅಷ್ಟೇ ಅಲ್ಲ ರಾಜ್ಯಕ್ಕೆ ಅವರು ಶಕ್ತಿಯಾಗಿದ್ದರು. 371 (ಜೆ) ಕಲಂ ತಿದ್ದುಪಡಿಗಾಗಿ ಮುಂಚೂಣಿಯಾಗಿ ಹೋರಾಟ ಮಾಡಿದ್ದರು. ಅವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.‌

ಇದನ್ನೂ ಓದಿ: Vastu Tips: ವಾಸ್ತು ದೋಷ ಪರಿಹಾರಕ್ಕೆ ನಿಮ್ಮ ದೇವರ ಕೋಣೆ ಹೀಗಿರಲಿ…

ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿದರು. ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಪ್ರಾಸ್ತಾವಿಕ ಮಾತನಾಡಿ, ವಿಶ್ವನಾಥರಡ್ಡಿ ಅವರ ವ್ಯಕ್ತಿತ್ವದ ಕಿರು ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಅಬ್ಬೆತುಮಕೂರಿನ ಡಾ.ಗಂಗಾಧರ ಸ್ವಾಮೀಜಿ, ಹೆಡಗಿಮದ್ರಾದ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪಂಚಮ ಸಿದ್ಧಲಿಂಗ ಸ್ವಾಮೀಜಿ, ದೋರನಹಳ್ಳಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ದಾಸಬಾಳ ಮಠದ ಶ್ರೀ ವೀರೇಶ್ವರ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಸಕ ಶರಣಗೌಡ ಕಂದಕೂರ, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ), ಹಾಲಪ್ಪ ಆಚಾರ್, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಮುಖಂಡರಾದ ಲಿಂಗಾರಡ್ಡಿ ಭಾಸರಡ್ಡಿ, ಡಾ. ವೀರಬಸವಂತರಡ್ಡಿ ಮುದ್ನಾಳ್, ಹಣಮಂತರಡ್ಡಿ ಮುದ್ನಾಳ್ ಹಾಗೂ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Joe Root : ರೋಹಿತ್ ಶರ್ಮಾ ದಾಖಲೆ ಸರಿಟ್ಟಿದ ಇಂಗ್ಲೆಂಡ್ ಬ್ಯಾಟರ್​ ಜೋ ರೂಟ್​

ರಾಚಣ್ಣಗೌಡ ಮುದ್ನಾಳ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು.

Exit mobile version