Site icon Vistara News

Yadgiri News: ಸಂಕ್ರಾಂತಿ ರೈತರಿಗೆ ಉತ್ತಮ ಬೆಳೆಯನ್ನು ತರಲಿ: ಡಾ. ಗಂಗಾಧರ ಶ್ರೀ

Abbethumakur Peetadhipathi Dr.Gangadhar Swamiji aashirvachan at holi jatra yadgiri

ಯಾದಗಿರಿ: ಸಂಕ್ರಾಂತಿ ಹಬ್ಬ (Sankranti Festival) ರೈತರ (farmers) ಪಾಲಿಗೆ ಸುಗ್ಗಿಯ ಹಿಗ್ಗನ್ನು ತರುವ ಹಬ್ಬವಾಗಿದೆ. ರೈತ ಉತ್ತಿ ಬಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ರೈತರಿಗೆ ಉತ್ತಮ ಬೆಳೆಯನ್ನು ತರಲಿ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶ್ರೀ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ವತಿಯಿಂದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಹೊಳಿ ಜಾತ್ರೆಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

ನೂತನ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿ ರೈತರ ಬದುಕಿಗೆ ಸಮೃದ್ಧಿಯನ್ನು ತರುವ ಹಬ್ಬವಾಗಿದೆ. ಈ ಹಬ್ಬ ಅನ್ನದಾತ ರೈತರಿಗೆ ಹಿಗ್ಗನ್ನು ತರಲಿ ಎಂದು ಶುಭ ಹಾರೈಸಿದರು.

ಸಂಕ್ರಾಂತಿ ಉತ್ತರಾಯಣದ ಪುಣ್ಯಕಾಲವಾಗಿದೆ. ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಪರ್ವ ಕಾಲವಾಗಿದೆ. ಇಂತಹ ವಿಶೇಷ ದಿನದಂದು ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಇದೇ ಸಂದರ್ಭದಲ್ಲಿ ಎಳ್ಳು ದಾನ ಮಾಡುವದರಿಂದಲೂ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಎಳ್ಳು ಬೆಲ್ಲವನ್ನು ಪರಸ್ಪರ ಕೊಡುಕೊಳ್ಳುವ ಪರಂಪರೆ ನಮ್ಮಲ್ಲಿದೆ ಎಂದರು.

ಇದನ್ನೂ ಓದಿ: Makar Sankranti: ಸಂಕ್ರಾಂತಿಗೆ ಬೆಂಗಳೂರಲ್ಲಿ 500 ಜನರಿಂದ ಸೂರ್ಯ ನಮಸ್ಕಾರ

ಇದಕ್ಕು ಮುನ್ನ ಶ್ರೀಗಳು ಅಪಾರ ಭಕ್ತ ವೃಂದದೊಂದಿಗೆ, ಅಬ್ಬೆತುಮಕೂರಿನ ಶ್ರೀ ಮಠದಿಂದ ಸೀಮಾಂತರದ ಭೀಮಾ ನದಿಯವರೆಗೆ ಡೊಳ್ಳು, ಹಲಗೆ, ಬಾಜಾ ಭಜಂತ್ರಿ, ವಿವಿಧ ಮಂಗಲ ವಾದ್ಯಗಳು ಮತ್ತು ಸುಮಂಗಲೆಯರ ಕಳಸದೊಂದಿಗೆ ಮೆರವಣಿಗೆಯೊಂದಿಗೆ ತೆರಳಿದರು. ಅಲ್ಲಿ ಶ್ರೀಗಳು ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಭೀಮಾನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನವನ್ನು ಮಾಡಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ಪುನಃ ಶ್ರೀಗಳು ತೆಪ್ಪದಲ್ಲಿ ನದಿಯ ಮಧ್ಯಭಾಗದಿಂದ ದಡಕ್ಕೆ ಆಗಮಿಸಿದರು. ಈ ವೇಳೆ ಭಕ್ತರು ಶ್ರೀಗಳ ಪಾದಪೂಜೆ ನೆರೆವೇರಿಸಿದರು.

ನಂತರ ಹೊಳಿ ಜಾತ್ರೆಗೆ ಆಗಮಿಸಿದ ಎಲ್ಲ ಭಕ್ತರು ಬಿಳಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಪುಂಡಿಪಲ್ಯ, ಹಿಂಡಿಪಲ್ಯ, ಎಣ್ಣೆ ಬದನೆಕಾಯಿ, ಶೇಂಗಾ ಹಿಂಡಿ, ಬಜ್ಜಿ, ಭರ್ತಾ, ಚಿತ್ರಾನ್ನ. ಹೀಗೆ ವಿವಿಧ ಬಗೆಯ ಸಂಕ್ರಾಂತಿಯ ಭಕ್ಷ ಭೋಜನವನ್ನು ಸವಿದರು.

ಈ ಬಾರಿ ಹೊಳಿ ಜಾತ್ರೆಯಲ್ಲಿ ವಿವಿಧ ಫಳಾರಗಳ ಮತ್ತು ಮಕ್ಕಳ ಆಟಿಕೆಗಳ ಅಂಗಡಿಗಳು ಹಾಕಿದ್ದರಿಂದ ಆಗಮಿಸಿದ ಜನತೆ ಭರ್ಜರಿಯಾಗಿ ವ್ಯಾಪಾರ ಮಾಡಿದರು, ಜಾತ್ರೆಯಲ್ಲಿ ಯರಗೋಳದ ಭೀಮಜ್ಯೋತಿ ಕಲಾ ತಂಡದವರು ನಡೆಸಿಕೊಟ್ಟ ಜನಪದ ಗೀತೆಗಳ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: Karnataka Reservoirs: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ; ಶೇ. 40ಕ್ಕಿಂತ ಕಡಿಮೆ ನೀರು!

ಚೆನ್ನಪ್ಪಗೌಡ ಮೋಸಂಬಿ, ನರಸನಗೌಡ ರಾಯಚೂರ, ಡಾ. ಸುಭಾಶ್ಚಂದ್ರ ಕೌಲಗಿ, ವಿಶ್ವನಾಥ ಸಿರಿವಾರ ಸೇರಿದಂತೆ ಅಬ್ಬೆತುಮಕೂರು ಹಾಗೂ ರಾಜ್ಯದ ವಿವಿಧ ಭಾಗದಿಂದ ಅಪಾರ ಭಕ್ತರು ಆಗಮಿಸಿ, ಜಾತ್ರೆಯಲ್ಲಿ ಭಾಗಿಯಾಗಿದ್ದರು.

Exit mobile version