ಯಾದಗಿರಿ: ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳಾದ ಮೆಗ್ನಿಷಿಯಂ, ತಾಮ್ರ, ಪಾಸ್ಪರಸ್ ಸೇರಿದಂತೆ ಹತ್ತಾರು ಆರೋಗ್ಯಕ್ಕೆ ಉಪಯುಕ್ತವಾದ ಅಂಶವಿದೆ. ಸಿರಿಧಾನ್ಯಗಳು (Millets) ಔಷಧವಿದ್ದಂತೆ, ಎಲ್ಲರೂ ಸೇವಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಹೆಚ್ಚಾಗಿ ಸಿರಿಧಾನ್ಯ ಬೆಳೆದು ಸೇವಿಸುತ್ತಿದ್ದರ ಪರಿಣಾಮ ಅವರು ಬಹಳ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಮತ್ತು ಚೈನೀಸ್ ತಿನಿಸುಗಳ ಮೊರೆ ಹೋಗುತ್ತಿರುವ ಕಾರಣ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Raichur News: ಲಿಂಗಸುಗೂರಿನ ಸರ್ಕಾರಿ ಶಾಲೆಯಲ್ಲಿ ಹಳ್ಳಿ ಸೊಗಡು ಅನಾವರಣ
ಸರ್ಕಾರವು ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹ ಧನ ಸಹಾಯ ನೀಡುತ್ತಿದ್ದು, ಫಲಾನುಭವಿಗಳು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ, ಆರೋಗ್ಯವಂತ ಕರ್ನಾಟಕ ನಿರ್ಮಿಸಿ ಎಂದರು.
ಜಿಲ್ಲಾ ಮಟ್ಟದ ಸಿರಿಧಾನ್ಯಗಳ ರೋಡ್ ಶೋ ಕಾರ್ಯಕ್ರಮವು ಸಿಪಿಎಸ್ ಶಾಲಾ ಮೈದಾನದಲ್ಲಿ ಚಾಲನೆಗೊಂಡು ಹಳೆ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಮೋಚಿಗಡ್ಡ, ಮಹಾತ್ಮ ಗಾಂಧೀಜಿ ವೃತ್ತ ಮೂಲಕ ನಡೆದು ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ: Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ; ರಾಜ್ಯ ಸರ್ಕಾರ ಸಲಹೆ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ, ತಹಶೀಲ್ದಾರ ಉಮಾಕಾಂತ ಹಳ್ಳಿ, ಕೃಷಿ ಜಂಟಿ ನಿರ್ದೇಶಕಿ ಮಂಜುಳಾ ಬಸರೆಡ್ಡಿ, ಭೀಮರಾಯನಗುಡಿ ಕೃಷಿ ವಿದ್ಯಾಲಯದ ಡೀನ್ ಡಾ. ಪ್ರಕಾಶ ಕುಚನೂರು, ಕವಡಿಮಟ್ಟಿ ಕೃಷಿ ವಿದ್ಯಾಲಯ ವಿಜ್ಞಾನಿ ಡಾ. ಜಯಪ್ರಕಾಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ್, ಶಹಾಪುರ ಸಹಾಯಕ ಕೃಷಿ ನಿರ್ದೇಶಕ ಸುನಿಲ್ ಕುಮಾರ್, ಸುರಪುರ ಸಹಾಯಕ ಕೃಷಿ ನಿರ್ದೇಶಕ ಡಾ. ಭೀಮರಾಯ ಹವಾಲ್ದಾರ್, ಯಾದಗಿರಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ವಾರದ್ ಜಂಟಿ ಕೃಷಿ ನಿರ್ದೇಶಕರ ಕಚೇರಿ ತಾಂತ್ರಿಕ ಅಧಿಕಾರಿ ರಾಜಕುಮಾರ್, ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.