Site icon Vistara News

Yadgiri News: ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಶರಣಬಸಪ್ಪಗೌಡ ಸೂಚನೆ

Yadgiri district in charge Minister Sharanbasappa Gowda Darshanapura latest meeting at yadgiri

ಯಾದಗಿರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ನಗರ ನೀರು ಸರಬರಾಜು (water supply) ಹಾಗೂ ಗ್ರಾಮಾಂತರ ಪ್ರದೇಶಗಳಿಗೆ (Rural Areas) ನೀರು ಪೂರೈಕೆ ಯೋಜನೆಗಳ ಕುರಿತು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಶೀಲಿಸಿದರು.

ಸಭೆಯಲ್ಲಿ ಜಲಧಾರೆ ಯೋಜನೆಯಲ್ಲಿ ನೀರು ಪೂರೈಕೆ ಕಾಮಗಾರಿಗಳು, ನಗರೋತ್ಥಾನ ಹಂತ-4 ರ ಕಾಮಗಾರಿಗಳು, ಅಮೃತ-2 ರ ಯೋಜನಾ ಕಾಮಗಾರಿಗಳು, ಜಲಧಾರೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿಯ ಅಕ್ಷರ ಆವಿಷ್ಕಾರ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಬಗ್ಗೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ನಗರೋತ್ಥಾನ ಯೋಜನೆ ಹಂತ-3 ರ ಕಾಮಗಾರಿಗಳು ಸಂಪೂರ್ಣ ಪೂರ್ಣಗೊಂಡಿದ್ದು, ಹಂತ-4 ರ ಅಡಿಯಲ್ಲಿ ಶಹಾಪುರ, ಕೆಂಭಾವಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಹಾಗೂ ತಾಂತ್ರಿಕ ಅನುಮತಿಗೆ ಕೋರಲಾಗಿದೆ ಎಂದರು.

ಇದನ್ನೂ ಓದಿ: Hardik Pandya : ಸ್ಟೇಡಿಯಮ್​ನಲ್ಲೇ ಕೇಕ್ ಕತ್ತರಿಸಿ ಬರ್ತ್​ಡೇ ಆಚರಿಸಿಕೊಂಡ ಪಾಂಡ್ಯ

ಕುಡಿಯುವ ನೀರು ಪೂರೈಕೆ ಅಮೃತ-2 ರ ಯೋಜನೆಯಡಿ ಒಟ್ಟು 175 ಕೋಟಿ ರೂಪಾಯಿಗಳು ಈ ಯೋಜನೆಯಡಿ ಮಂಜೂರಾಗಿವೆ. ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 50 ಕೋಟಿ ರೂಪಾಯಿ, ಗುರುಮಿಟಕಲ್ 25 ಕೋಟಿ ರೂಪಾಯಿ, ಭೀಮರಾಯನ ಗುಡಿ ವ್ಯಾಪ್ತಿಯಲ್ಲಿ 22 ಕೋಟಿ ಹಾಗೂ ಶಹಾಪುರ 80 ಕೋ. ರೂಪಾಯಿ ಮಂಜೂರಾಗಿದೆ. ಮುಂಬರುವ ಡಿಸೆಂಬರ್ ಅವಧಿಯೊಳಗೆ ಟೆಂಡರ್ ಕರೆದು ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಲಧಾರೆ ಯೋಜನೆಯಡಿ ಜಾಕ್ ವೆಲ್ ಹಾಗೂ ಇಂಟೆಕ್‌ವೆಲ್ ವ್ಯಾಪ್ತಿಯಲ್ಲಿ ಒಟ್ಟು 400 ಕಿ.ಮೀ ಪೈಕಿ 100 ಕಿ.ಮೀ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಕೊಡೆಕಲ್ ಬಳಿ 170 ಎಂ ಎಲ್ ಡಿ ನೀರು ಸಂಗ್ರಹಣಾ ಹಾಗೂ ಸರಬರಾಜು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅದರಂತೆ ಅರಕೇರಾ ಜೆ . ಬಳಿಯಲ್ಲಿ ಕೂಡ ಕಾಮಗಾರಿಗಳು ನಡೆಯುತ್ತಿದ್ದು ಒಟ್ಟು 395 ಓವರ್ ಹೆಡ್ ಜಲಸಂಗ್ರಹಗಾರ (ಟ್ಯಾಂಕ್) ಗಳ ಪೈಕಿ 90 ಟ್ಯಾಂಕ್ ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ, ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಶಾಲೆಗಳ ದುರಸ್ತಿಗಾಗಿ ಒಟ್ಟು 75 ಕೋಟಿ ರೂಪಾಯಿಗಳು ಮಂಜೂರು ಆಗಿದೆ. ತಕ್ಷಣ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳು ಮತ್ತು ಅವಶ್ಯಕ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಎಲ್ಲಾ ದುರಸ್ತಿ ಶಾಲೆಗಳ ಪರಿಶೀಲನೆಗಾಗಿ ಈಗಾಗಲೇ ಪ್ರತಿ ತಾಲೂಕುವಾರು ತಾಂತ್ರಿಕ ಸಮಿತಿಗಳನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಈ ವರದಿ ಅಧಿಕಾರಿಗಳಿಂದ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಅದರಂತೆ ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಹೊಸ ಶಾಲಾ ಕಟ್ಟಡಗಳ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Big Pumpkin: ಹಿತ್ತಲಿನಲ್ಲಿ ಯಾರೂ ಎತ್ತಲಾರದಂಥ 1247 ಕೆಜಿ ತೂಕದ ಕುಂಬಳಕಾಯಿ ಬೆಳೆದ ಶಿಕ್ಷಕ!

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಸೇರಿದಂತೆ ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version