ಯಾದಗಿರಿ: ವೈದ್ಯರು (Doctors) ಹಾಗೂ ಸಿಬ್ಬಂದಿ ಜಿಲ್ಲಾ ಕೇಂದ್ರಕ್ಕೆ ತೆರಳದೆ ತಾವು ಕಾರ್ಯನಿರ್ವಹಣೆ ಮಾಡುವ ಆಸ್ಪತ್ರೆಯ ಕೇಂದ್ರ ಸ್ಥಾನದಲ್ಲಿದ್ದು, ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Yadgiri News) ತಿಳಿಸಿದರು.
ತಾಲೂಕಿನ ಮುದ್ನಾಳ ಗ್ರಾಮದಲ್ಲಿ ಶುಕ್ರವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ, ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವಸತಿ ಗೃಹವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಮುದ್ನಾಳ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಆರೋಗ್ಯ ಕಾಪಾಡಲು ಮುದ್ನಾಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವು ಹಳೆದಾಗಿದ್ದು ಇದರಿಂದ ಕಟ್ಟಡ ಶಿಥಿಲಗೊಂಡಿತ್ತು.ಇದನ್ನು ಮನಗೊಂಡು ಹಳೆ ಆಸ್ಪತ್ರೆ ಪಕ್ಕದಲ್ಲೇ ನೂತನ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ವಸತಿ ಗೃಹ ನಿರ್ಮಾಣ ಮಾಡಲಾಗಿದೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರವು ದಿನದ 24 ಗಂಟೆ ಜನರ ಸೇವೆ ನೀಡಲಿದೆ ಎಂದರು.
ಇದನ್ನೂ ಓದಿ: Fraud Case : ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್
ವೈದ್ಯರು ಹಾಗೂ ಸ್ಟಾಪ್ ನರ್ಸ್ ಅವರು ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಇದ್ದು ಕೆಲಸ ಮಾಡಬೇಕು. ರೋಗಿಗಳು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಸಕಾಲಕ್ಕೆ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಮಾತನಾಡಿ, 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ, ಮುದ್ನಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಪ್ರಾಥಮಿಕ ಆರೋಗ್ಯ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕು. ದಿನದ 24 ಗಂಟೆ ಉಚಿತ ಆರೋಗ್ಯ ಸೇವೆ ಆಸ್ಪತ್ರೆ ಯಲ್ಲಿ ಕಲ್ಪಿಸಲಾಗುತ್ತದೆ ಎಂದರು.
ಇದನ್ನೂ ಓದಿ: IPL 2024: ಡೆಲ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ವಿಶ್ವ ದಾಖಲೆಯ ಶತಕ ವೀರ; ಎದುರಾಳಿಗಳಿಗೆ ನಡುಕ!
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗರೀಮಾ ಪನ್ವಾರ್, ಟಿಎಚ್‌ಒ ಡಾ.ಹಣಮಂತರೆಡ್ಡಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುಧಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇನಕ ವಿನೋದ್ ರಾಠೋಡ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಡಾ.ಜ್ಯೋತಿ ಕಟ್ಟಿಮನಿ, ಡಾ. ನಾಗಣ್ಣ ಮುದ್ನಾಳ, ಪಿಡಿಒ ನೀಲಕಂಠ, ರಾಘವೇಂದ್ರ ಕುಲಕರ್ಣಿ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.