ಯಾದಗಿರಿ: ಸರ್ಕಾರದ ಅವಧಿ ಇರುವವರೆಗೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಜಿಲ್ಲೆಗೆ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Yadgiri News) ಹೇಳಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಸರ್ಕಾರವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಬಡತನ ಮತ್ತು ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬ ವರ್ಗದವರಿಗೂ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯ ಒದಗಿಸಬೇಕಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ICC T20 Rankings : ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಭರ್ಜರಿ ಜಿಗಿತ ಕಂಡ ಋತುರಾಜ್
ಸಗರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹವು 3 ಕೋಟಿ 11 ಲಕ್ಷ ರೂ. ವೆಚ್ಚದಲ್ಲಿ 2 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ. ಆಸ್ಪತ್ರೆ ಜಾಗ ನೀಡಿದ ದಾನಿಗಳಿಗೂ ಅಭಾರಿಯಾಗಿದ್ದು, ಆಸ್ಪತ್ರೆಗೆ ಕಾಂಪೌಂಡ್ ಮತ್ತು ರಸ್ತೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ವತಿಯಿಂದ ಅನುಮೋದನೆ ಪಡೆಯುತ್ತೇವೆ ಎಂದು ಸಚಿವರು ಹೇಳಿದರು.
ಗ್ರಾಮೀಣ ರಸ್ತೆಗಳು ಗ್ರಾಮೀಣ ಪ್ರದೇಶಗಳ ಜೀವನಾಡಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮಾರುಕಟ್ಟೆಗಳು ಮುಂತಾದ ಅಗತ್ಯ ಸೇವೆಗಳಿಗೆ ಅವಶ್ಯ ಇರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ʼಪ್ರಗತಿಪಥʼ ಯೋಜನೆ ಜಾರಿಯಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಪಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ಹೆಚ್ಚುವರಿ ಅನುದಾನ ತರಲಾಗುವುದು. ಜಿಲ್ಲೆ ಅಭಿವೃದ್ದಿಯಾಗಲು ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಚಿತ; ಎಂ ಬಿ ಪಾಟೀಲ್
ಈ ಸಂದರ್ಭದಲ್ಲಿ ಸಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಎಸ್. ಸುಬೇದಾರ, ಭೂದಾನಿ ತಿರುಪತಿ ಹತ್ತಿಕಟಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಗುತ್ತೇದಾರ, ಶ್ರೀಕಾಂತಗೌಡ ಸುಬೇದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.