ಯಾದಗಿರಿ: ಸಾರ್ವಜನಿಕರ ಸಮಸ್ಯೆಗಳ (Public Problems) ನಿವಾರಣೆಗೆ ಸರ್ಕಾರಿ ಅಧಿಕಾರಿಗಳು ಕಾನೂನು ಬದ್ದವಾಗಿ ಸಮಯೋಚಿತ ಹಾಗೂ ಸಕಾಲಕ್ಕೆ ಸ್ಪಂದಿಸುವ ಕೆಲಸ ಮಾಡುವಂತೆ ರಾಜ್ಯದ ಉಪ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಅಹವಾಲು, ಕುಂದು ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳ ನಡುವಿನ ಪವಿತ್ರ ಬಾಂಧವ್ಯ ತಿಳಿಯಲು ಹಾಗೂ ವೃದ್ಧಿಸಲು ಈ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನರ ಉತ್ತಮ ಜೀವನಕ್ಕೆ ಅಡಿಪಾಯ ಹಾಕಲು ಅನುಕೂಲವಾಗುವಂತೆ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳಾದ ಸ್ವತಂತ್ರ ಜೀವನ ಮತ್ತು ಗೌರವಯುತ ಜೀವನಕ್ಕೆ ಅವರ ಅವಶ್ಯಕತೆಗಳಿಗೆ, ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.
ಇದನ್ನೂ ಓದಿ: Premature Babies: ಅವಧಿಪೂರ್ವ ಜನಿಸಿದ ಕೂಸುಗಳ ಆರೈಕೆ ಹೇಗೆ?
ಸರ್ಕಾರವು ಸಾರ್ವಜನಿಕರ ಉತ್ತಮ ಜೀವನಕ್ಕಾಗಿ ಹಲವು ಸವಲತ್ತುಗಳು ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಫಲಾನುಭವಿಗಳಿಗೆ ಸಿಗಬಹುದಾದ ಸವಲತ್ತುಗಳನ್ನು ಸಕಾಲಕ್ಕೆ ತಲುಪಿಸಬೇಕು. ಅತ್ಯಂತ ಶ್ರೇಷ್ಠ ಹಾಗೂ ಉತ್ಕೃಷ್ಟ ಜವಾಬ್ದಾರಿ ಹೊಂದಿರುವುದನ್ನು ತಾವು ಮನಗಾಣಬೇಕು. ಯೋಜನೆಗಳ ಮತ್ತು ಸಾರ್ವಜನಿಕರ ತೊಂದರೆಗಳ ನಿವಾರಣೆ ಮತ್ತು ಪರಿಹಾರಕ್ಕೆ ಸ್ಪಂದಿಸುವಂತೆ ಅವರು ಸೂಚನೆ ನೀಡಿದರು.
ಅಧಿಕಾರಿಗಳ ನಿರ್ಲಕ್ಷ್ಯ, ಸಕಾಲಕ್ಕೆ ಫಲಾನುಭವಿಗಳಿಗೆ ಸೌಲಭ್ಯಗಳು ಕಲ್ಪಿಸದಿದ್ದಲ್ಲಿ ಅವರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಕಾನೂನಾತ್ಮಕವಾಗಿ ರಚನೆಯಾಗಿರುವ ಲೋಕಾಯುಕ್ತ ಸಂಸ್ಥೆಯ ಮೂಲಕವೂ ಅವಶ್ಯಕ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕೆಲವು ಪತ್ರಿಕಾ ಮಾಧ್ಯಮದಲ್ಲಿ ಬರುವ ಸಮಸ್ಯೆಗಳ ಕುಂದುಕೊರತೆ ಬಗ್ಗೆಯೂ ಸ್ವಯಂ ಪ್ರೇರಿತವಾಗಿ ದೂರು ನೋಂದಣಿ ಮಾಡಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Digital Payment: ಗಮನಿಸಿ; ಡಿಸೆಂಬರ್ 31ರಿಂದ ಈ ಯುಪಿಐ ಖಾತೆಗಳು ಬಂದ್!
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ, ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕ ಶಶಿಕಾಂತ ಭಾವಿಕಟ್ಟಿ, ಉಪ ನಿಬಂಧಕ ಚನ್ನಕೇಶವ ರೆಡ್ಡಿ ಎಂ.ವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಎಲ್. ಹೊನೋಲೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಯಾದಗಿರಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ. ಆರ್. ಕರ್ನೂಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.