ಯಾದಗಿರಿ: ಅಭಿವೃದ್ಧಿ (Development) ಹೊಂದುತ್ತಿರುವ ಭಾರತಕ್ಕೆ, ದೇಶದಲ್ಲಿನ ಯುವ ಸಮುದಾಯ ಸ್ವಯಂ ಸೇವಕರಾಗಿ ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕಾದದ್ದು ತೀರಾ ಅವಶ್ಯವಿದೆ ಎಂದು ಪಿರಾಮಲ್ ಸಂಸ್ಥೆಯ ಯಾದಗಿರಿ (Yadgiri News) ವಿಭಾಗದ ಪ್ರೋಗ್ರಾಮ್ ಮ್ಯಾನೇಜರ್ ಮಹೇಶ್ ಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗ ಹಾಗೂ ಪಿರಾಮಲ್ ಫೌಂಡೇಷನ್ ಸಹಯೋಗದಲ್ಲಿ ನಡೆದ ಒಂದು ದಿನದ ‘ಅಭಿಶಿಕ್ಷಣ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಕರು ಈ ದೇಶದಲ್ಲಿನ ಬಹುದೊಡ್ಡ ಶಕ್ತಿ ಸಂಪನ್ಮೂಲ, ಅದನ್ನು ಸೂಕ್ತ ಸಂದರ್ಭಗಳಲ್ಲಿ ಬಳಕೆಯಾಗಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಪಿರಾಮಲ್ ಫೌಂಡೇಷನ್ ದೇಶದ ಹಲವು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಯುವ ಸಬಲೀಕರಣ, ಸಮುದಾಯ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಅದರಂತೆಯೇ ಯಾದಗಿರಿಯ ಯುವ ಸಮುದಾಯ ತಮ್ಮ ಯುವಶಕ್ತಿಯನ್ನು ಸಮಾಜ ಸೇವೆಗೆ ಸಲ್ಲಿಸುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆಗೆ ತಿದ್ದುಪಡಿ; ಹೊಸ ಅಧಿಸೂಚನೆಯಲ್ಲಿ ಏನಿದೆ?
ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಉಮೇಶ್ ತೇಜಪ್ಪ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಯಾದಗಿರಿ ಜಿಲ್ಲೆ ಮೊದಲನೆಯದಾಗಿದೆ. ಈ ಹಣೆ ಪಟ್ಟಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಮತ್ತು ಸರ್ಕಾರದ ಅನೇಕ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಸ್ವಯಂ ಸೇವಕರಾಗಿ ಹಲವು ಸಾಹಿತಿಗಳು, ಸಮಾಜದ ಚಿಂತಕರು ಚಿಂತನೆಯನ್ನು ಮಾಡುತ್ತಿದ್ದಾರೆ.
ಅದರಂತೆಯೇ ಸಮಾಜಕಾರ್ಯ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ತಮ್ಮ ಅಮೂಲ್ಯವಾದ ಸಮಯವನ್ನು ಈ ತರಹದ ಕೆಲಸಗಳಿಗೆ ನೀಡುವುದರ ಮೂಲಕ ಇಂತಹ ಸಂಸ್ಥೆಗಳಿಗೆ ಸಹಾಯ ಸಹಕಾರ ಮಾಡುವುದು ಒಂದು ಮುಖ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3
ಈ ಸಂದರ್ಭದಲ್ಲಿ ಅಧ್ಯಾಪಕರಾದ ಲಿಂಗರಾಜ್ ಸಿನ್ನೂರು, ಸಾಬರೆಡ್ಡಿ ಬಂಗಾರಿ, ಡಾ. ಸಿ. ಆರ್. ಕಂಬಾರ, ಶೆಟ್ಟಿಕೇರಾ, ಭೌತಶಾಸ್ತ್ರ ವಿಭಾಗದ ಗೌರೀಶ್ವರಯ್ಯ, ಪಿರಾಮಲ್ ಫೌಂಡೇಷನ್‌ನ ಸಿಬ್ಬಂದಿಗಳಾದ ವಿಶಾಲ ಪಾಟೀಲ್, ಅನಿಲ್ ರೆಡ್ಡಿ ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.