ಯಾದಗಿರಿ: ಜಾನುವಾರುಗಳಿಗೆ (cattle) ಬರುವ ಕಾಲುಬಾಯಿ ರೋಗದಿಂದ ಮುಕ್ತ ಮಾಡುವಲ್ಲಿ ಪಶುಪಾಲನೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಸಾರ್ವಜನಿಕರು ಲಸಿಕಾ (Vaccine) ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಸುಶೀಲಾ ಬಿ. ಕೋರಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 4ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಹಾಗೂ ಲಸಿಕಾ ಕಾರ್ಯಕ್ರಮದ ಅರಿವು ಮೂಡಿಸುವ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಲಸಿಕೆದಾರರು ನಿಮ್ಮ ಗ್ರಾಮಕ್ಕೆ, ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕುವರು. ಯಾರೂ ಕೂಡ ತಮ್ಮ ಎಮ್ಮೆ, ದನ ಕರುಗಳು ಲಸಿಕೆಯಿಂದ ವಂಚಿತರಾಗದಂತೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: NASA: ಚಂದ್ರನ ದಕ್ಷಿಣ ಧ್ರುವದ ಬೆರಗುಗೊಳಿಸುವ ಚಿತ್ರ ಕ್ಲಿಕ್ಕಿಸಿದ ನಾಸಾ, ಏನಿದೆ ಅದರಲ್ಲಿ?
ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ರೋಗವನ್ನು ತಡೆಯಲು ದನ, ಎಮ್ಮೆ ಮತ್ತು ಕರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಿಸಿ ಜಿಲ್ಲೆಯಲ್ಲಿ ಶೇ.100 ಲಸಿಕಾ ಪ್ರಗತಿ ಸಾಧಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಸೆ. 26 ರಿಂದ ಅಕ್ಟೋಬರ್ 25 ರವರೆಗೆ ಉಚಿತವಾಗಿ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು ದನ, ಎಮ್ಮೆ ಮತ್ತು ಕರುಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಡಿಸಿ ತಿಳಿಸಿದರು.
ಈ ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಹರಡುವ ಮಾರಕ ರೋಗವಾಗಿದೆ. ರೋಗದಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವುದು ಅತ್ಯಗತ್ಯವಾಗಿರುತ್ತದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿದಂತೆ 2,33,336 ದನಗಳು ಹಾಗೂ 57438 ಎಮ್ಮೆಗಳು ಒಟ್ಟು 290774 ಜಾನುಗಳು ಇರುತ್ತವೆ. ಒಟ್ಟು 290800 ಲಸಿಕೆಗಳು ಜಿಲ್ಲೆಯಲ್ಲಿ ಸಂಗ್ರಹವಿದ್ದು, 192 ಸಿಬ್ಬಂದಿಗಳು ಲಸಿಕಾಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಯು ಮಾಹಿತಿ ನೀಡಿದರು.
ಇದನ್ನೂ ಓದಿ: Wall collapsed : ವಸತಿ ಶಾಲೆಯಲ್ಲಿ ಗೋಡೆ ಕುಸಿದು ಬಾಲಕ ಸಾವು; ಇನ್ನಿಬ್ಬರು ಗಂಭೀರ
ಈ ಸಂದರ್ಭದಲ್ಲಿ ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ. ರಾಜು ದೇಶಮುಖ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ರಶೀದ್ ಇಕ್ಬಾಲ್ ಸೇರಿದಂತೆ ಎಲ್ಲಾ ತಾಲೂಕಿನ ಪಶುವೈದ್ಯಾಧಿಕಾರಿಗಳು, ಸಹಾಯಕ ನಿರ್ದೇಶಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.