Site icon Vistara News

Yadgiri News: ಬಸವಸಾಗರ ಜಲಾಶಯದಲ್ಲಿ ನೀರಿನ ಕೊರತೆ; ಕುಡಿಯಲಷ್ಟೇ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

Yadgiri DC visits Basavasagara Reservoir

ಯಾದಗಿರಿ: ಮಹಾರಾಷ್ಟ್ರ (Maharashtra) ಹಾಗೂ ರಾಜ್ಯದಲ್ಲಿ ಮಳೆ (Rain) ಕೊರತೆಯಾದ ಪರಿಣಾಮ ಬಸವಸಾಗರ ಜಲಾಶಯಕ್ಕೆ (Basavasagara Reservoir) ನೀರಿನ ಒಳಹರಿವು ಆಗದೆ ನೀರಿನ ಪ್ರಮಾಣ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಕುಡಿಯಲು ಮಾತ್ರ ಬಳಕೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಈ ವೇಳೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಕಾಲುವೆಗೆ ಅಕ್ರಮವಾಗಿ ಪೈಪ್, ಪಂಪ್ ಸೆಟ್‌ಗಳನ್ನು ಅಳವಡಿಸಿದ್ದು ಕಂಡುಬಂದರೆ ತಕ್ಷಣ ತೆರವುಗೊಳಿಸಿ, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Actress Kajol : ಮಾಧ್ಯಮದವರನ್ನು ಹ್ಯಾಂಡಲ್‌ ಮಾಡುವಲ್ಲಿ ನನಗಿಂತ ನನ್ನ ಮಗಳೇ ಬೆಸ್ಟ್‌ ಎಂದ ಕಾಜೊಲ್‌

ಜಿಲ್ಲೆಯಲ್ಲಿ ಮಳೆ ಕೊರತೆ ಇರುವುದರಿಂದ ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇರುವ ನೀರನ್ನು ಕುಡಿಯುವ ಉದ್ದೇಶಕ್ಕಷ್ಟೇ ಲಭ್ಯವಾಗುವಂತೆ ಕ್ರಮ ವಹಿಸಿ ಎಂದು ಅವರು ಸೂಚಿಸಿದರು.

ಜಲಾಶಯದಲ್ಲಿ ಒಟ್ಟು 33.31 ಟಿಎಂಸಿ ನೀರು ಸಂಗ್ರಹವಿದೆ. ಡೆಡ್ ಸ್ಟೋರೇಜ್ ಸಾಮರ್ಥ್ಯ 14.76 ಟಿಎಂಸಿ ಇದೆ. ಒಳ ಹರಿವು 240 ಕ್ಯೂಸೆಕ್, ಹೊರ ಹರಿವು 50 ಕ್ಯೂಸೆಕ್ ಇದೆ. ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಕುಡಿಯುವ ನೀರಿಗಾಗಿ 39 ದಿನದವರೆಗೆ ಲಭ್ಯವಾಗಬಹುದು ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ಜಲಾಶಯದ ಪಕ್ಕದಲ್ಲಿ ಸುಂದರವಾದ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಿ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಿ ಎಂದು ಅವರು ಸೂಚಿಸಿದರು.

ಇದನ್ನೂ ಓದಿ: Road Accident: ಹೆದ್ದಾರಿಯಲ್ಲಿ ಬೈಕ್​, ಕಾರ್​ಗಳಿಗೆ ಡಿಕ್ಕಿ ಹೊಡೆದ ಕಸದ ಲಾರಿ​; 15 ಮಂದಿ ದುರ್ಮರಣ

ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ ಮಂಜುನಾಥ ಆರ್., ಅಭಿಯಂತರ ಜಿ.ಜಿ. ಪವಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version