Site icon Vistara News

Yadgiri News: ಬರಡು ಭೂಮಿಯಲ್ಲಿ ಈ ರೈತ ಬಂಪರ್ ಮಾವು ಬೆಳೆದಿದ್ದು ಹೇಗೆ?

Bilhara village farmer grew bumper mango on barren land

ಯಾದಗಿರಿ: ಆ ಭೂಮಿ ಕೃಷಿ (Agriculture) ಮಾಡಲು ಯೋಗ್ಯವಿಲ್ಲದಂತಾಗಿತ್ತು. ಯಾವ ಬೆಳೆಯೂ ಬೆಳೆಯುತ್ತಿರಲಿಲ್ಲ. ಇಂತಹ ಭೂಮಿಯಲ್ಲಿ ಏನಾದರು ಕೃಷಿ ಮಾಡಿ ಯಶಸ್ಸು ಸಾಧಿಸಬೇಕೆಂದು ಕನಸು ಕಟ್ಟಿಕೊಂಡಿದ್ದ‌ ರೈತ, ಬರಡು ಭೂಮಿಯಲ್ಲಿ ಬಂಪರ್ ಮಾವು ಬೆಳೆದು ಇತರರಿಗೆ (Yadgiri News) ಮಾದರಿಯಾಗಿದ್ದಾನೆ.

ಹೌದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದ ರೈತ ಮಲ್ಲಿಕಾರ್ಜುನರೆಡ್ಡಿ ಗೌಡ ತಮ್ಮ ಐದು ಎಕರೆ ಭೂಮಿಯಲ್ಲಿ ಯಾವುದೇ ಕ್ರಿಮಿನಾಶಕ ಬಳಸದೇ ಸಾವಯವ ಕೃಷಿ ಮಾಡಿ ಮಾವು ಬೆಳೆದು ಯಶಸ್ವಿಯಾಗಿದ್ದಾರೆ.

ರೈತ ಮಲ್ಲಿಕಾರ್ಜುನರೆಡ್ಡಿಗೌಡ ಅವರ ಐದು ಎಕರೆ ಭೂಮಿಯಲ್ಲಿ ಯಾವುದೇ ಬೇರೆ ಬೆಳೆ ಬೆಳೆಯುತ್ತಿರಲಿಲ್ಲ. ಹೀಗಾಗಿ ಮಾವು ಬೆಳೆಯಲು ಯೋಜನೆ ರೂಪಿಸಿ, 5 ಎಕರೆ ಭೂಮಿಯಲ್ಲಿ 2011ರಲ್ಲಿ 500 ಮಾವಿನ ಗಿಡಗಳನ್ನು ನಾಟಿ ಮಾಡಿದ್ದು, ಮೂರು ವರ್ಷಗಳ ನಂತರ ಮಾವು ಉತ್ತಮ ಫಲ ಕೊಡುತ್ತಿದೆ. ಇನ್ನು ನೀರಿಗಾಗಿ ಭೀಮಾನದಿ ಮೂಲಕ ಪೈಪ್ ಲೈನ್ ಹಾಕಿಕೊಂಡು ಹಾಗೂ ಜಮೀನಿನಲ್ಲಿ ಒಂದು ಬೋರ್‌ವೆಲ್ ಕೊರೆಸಿ ಮಾವಿನ ಗಿಡಕ್ಕೆ ನೀರು ಹರಿಸಲಾಗುತ್ತಿದೆ.

ಇದನ್ನೂ ಓದಿ: Vijayanagara News: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

ಸಾವಯವ ಗೊಬ್ಬರ ಬಳಕೆ

ಮಾವಿನ ಬೆಳೆಗೆ ಯಾವುದೇ ಕ್ರಿಮಿನಾಶಕ ಬಳಕೆ ಮಾಡಿಲ್ಲ. ಸಾವಯವ ಗೊಬ್ಬರ ಬಳಸಿ, ಮಾವು ಬೆಳೆದಿದ್ದಾರೆ. ಕೇಸರಿ, ರಸಪುರಿ, ಬೆನಿಶ್ಯಾನ್, ಮಲ್ಲಿಕಾ ಸೇರಿದಂತೆ ಹಲವು ತಳಿಯ ಮಾವು ಬೆಳೆದಿದ್ದು, ಉತ್ತಮ ಫಸಲು ಬಂದಿದೆ.

ಈ ಕುರಿತು ರೈತ ಮಲ್ಲಿಕಾರ್ಜುನರೆಡ್ಡಿ ಗೌಡ ಮಾತನಾಡಿ, ಬರಡುಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯುತ್ತಿರಲಿಲ್ಲ. 5 ಎಕರೆ ಭೂಮಿಯಲ್ಲಿ 500 ಕ್ಕೂ ಹೆಚ್ಚು ಮಾವು ಬೆಳೆದಿದ್ದು, ಯಾವುದೇ ಕ್ರಿಮಿನಾಶಕ ಹಾಕುವುದಿಲ್ಲ. ಸಾವಯವ ಗೊಬ್ಬರ ಬಳಸಿ ಮಾವು ಬೆಳೆಯಲಾಗಿದೆ. ಈಗ ಹೆಚ್ಚು ಮಾವು ಫಸಲು ಬಂದಿದೆ ಎಂದು ತಿಳಿಸಿದ್ದಾರೆ.

ಮಾವಿನ ಹಣ್ಣುಗಳು ಪೌಷ್ಟಿಕಾಂಶವುಳ್ಳ ಹಣ್ಣು ಆಗಿದ್ದು, ಅದರಲ್ಲೂ ಸಾವಯವ ಮಾವಿನ ಹಣ್ಣಿಗೆ ಭಾರೀ ಬೇಡಿಕೆ ಇದೆ. ಇನ್ನು ಸಾವಯವ ಮಾವು ಬೆಳೆದ ಹಿನ್ನೆಲೆಯಲ್ಲಿ ರೈತ, ಮಾವು ಮಾರಾಟ ಮಾಡಲು ಯಾವುದೇ ಮಾರುಕಟ್ಟೆಗೆ ಅಲೆದಾಡುವುದು ತಪ್ಪಿದೆ. ಖರೀದಿದಾರರೇ ಖುದ್ದಾಗಿ ಜಮೀನಿಗೆ ಆಗಮಿಸಿ ಒಂದು ಸ್ಯಾಂಪಲ್ ಮಾವಿನ ಹಣ್ಣು ಸೇವಿಸಿ, ಮಾವು ಖರೀದಿ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಮಾವಿನ ಹಣ್ಣುಗಳನ್ನು ಖರೀದಿ ಮಾಡಿ, ಬಳಿಕ ಅವುಗಳನ್ನು ಗುಜರಾತ್, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಕಳುಹಿಸುತ್ತಾರೆ.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದ ಈ ಸಾವಯವ ಮಾವಿನ ಹಣ್ಣಿಗೆ ಭಾರೀ ಡಿಮ್ಯಾಂಡ್ ಇದ್ದು, ರೈತ ಮಲ್ಲಿಕಾರ್ಜುನರೆಡ್ಡಿಗೌಡ ಉತ್ತಮ ಆದಾಯ ಗಳಿಸಿದ್ದಾರೆ.

Exit mobile version