Site icon Vistara News

Yadgiri News: ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

BJP protest against Congress governments anti farmer policy at Yadgiri

ಯಾದಗಿರಿ: ಕಾಂಗ್ರೆಸ್ ಸರ್ಕಾರವು (Congress government) ರೈತ ವಿರೋಧಿ ನೀತಿಯನ್ನು (anti-farmer policy) ಅನುಸರಿಸುತ್ತಿದೆ ಎಂದು ಆರೋಪಿಸಿ, ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರು ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ (Protest) ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್‌ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಚಿಂತಿಸುತ್ತಿಲ್ಲ. ಏತನ್ಮಧ್ಯೆ ರಾಜ್ಯಾದ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ಅನ್ನದಾತರಿಗೆ ಪೂರಕವಾಗುವ ಒಂದಾದರೂ ಯೋಜನೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಮ್ಮಾನ್ ಯೋಜನೆಗೆ ಈ ಹಿಂದೆ ರಾಜ್ಯ ಸರ್ಕಾರ ಸಹ 4 ಸಾವಿರ ರೂ.ನೀಡಿ, ರೈತರ ಖಾತೆಗೆ ಡಿಬಿಟಿ ಮೂಲಕ ಒಟ್ಟು 10 ಸಾವಿರ ರೂ.ಜಮೆ ಮಾಡುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಯೋಜನೆ ಸ್ಥಗಿತಗೊಳಿಸಿದೆ. ಅಲ್ಲದೆ, ಭೂಸಿರಿ, ರೈತ ವಿದ್ಯಾನಿಧಿ ಮತ್ತು ಜಿಲ್ಲೆಗೊಂದು ಗೋಶಾಲೆ ಸ್ಥಾಪನೆಯ ಹಿಂದಿನ ಸರ್ಕಾರದ ಪ್ರಸ್ತಾವನೆಗಳಿಗೆ ತಡೆ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Uttara Kannada News: ಮೊಬೈಲ್‌ ಕಳವು ಪ್ರಕರಣ; ಅಂತರ್‌ ಜಿಲ್ಲಾ ಕಳ್ಳನ ಬಂಧನ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತಾಪಿ ವರ್ಗದ ಸಮಸ್ಯೆಗಳನ್ನು ಆಲಿಸದೇ ನಿರ್ಲಕ್ಷ್ಯ ಮಾಡುತ್ತಿದೆ, ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ನೆಪದಲ್ಲಿ ರೈತರ, ಮಹಿಳೆಯರ ಹಾಗೂ ಕೃಷಿ ಕಾರ್ಮಿಕರ ಹಿತ ಕಾಪಾಡುವುದನ್ನು ಮರೆತಿದೆ ಎಂದು ಆರೋಪಿಸಿದರು.

ಜಿಲ್ಲಾ ವಕ್ತಾರ ಎಚ್.ಸಿ.ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಹಗೆತನ ಸಾಧಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿ ಯೋಜನೆಗಳಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಜನತೆ ಹೈರಾಣಾಗುವಂತಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: New Covid variant: ಕೋವಿಡ್ ಹೊಸ ರೂಪಾಂತರಿ ಕಾಟಕ್ಕೆ ಬೆಚ್ಚಿದ ಬ್ರಿಟನ್‌! ಏನಿದು ಎರಿಸ್? ಇಲ್ಲಿದೆ ವಿವರ‌

ಪ್ರತಿಭಟನೆಯಲ್ಲಿ ಮುಖಂಡರಾದ ಲಲಿತಾ ಅನಪುರ, ವೆಂಕಟರಡ್ಡಿ ಅಬ್ಬೆತುಮಕೂರ, ಗುರು ಕಾಮಾ, ಶ್ರೀದೇವಿ ಶಟ್ಟಿಹಳ್ಳಿ, ಶಂಕರ ಕರಣಗಿ, ಪರಶುರಾಮ ಕುರುಕುಂದಿ, ರಾಜಾ ಮುಕುಂದ ನಾಯಕ, ಶರಣಗೌಡ ಹೆಬ್ಬಳ್ಳಿ, ಹನುಮಂತರಾಯಗೌಡ ಕುಪ್ಪಿ ಹಾಗೂ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಮಂಜುನಾಥ ದಾಸನಕೇರಿ, ರಾಮು ನಾಯಕ, ಭೀಮರಾಯ ಜಂಗಳಿ, ಮಲ್ಲಿಕಾರ್ಜುನ ಕಂದಕೂರ, ರಾಘವೇಂದ್ರ ಯಕ್ಷಂತಿ, ದೇವೀಂದ್ರಪ್ಪ ಕೋನೆರ,ಮೇಲಪ್ಪ ಗುಳಗಿ, ರಾಜಶೇಖರ ಕಾಡನೋರ,ಮಲ್ಲಿಕಾರ್ಜುನ ಹೊನಗೇರಾ, ರಮೇಶ ದೊಡ್ಮನಿ, ವೀಣಾ ಮೋದಿ, ಸ್ನೇಹಾ ರಸಾಳಕರ, ಮಹಾದೇವಪ್ಪ ಗಣಪುರ, ಶಿವು ದಾಸನಕೇರಿ, ಚಂದ್ರು ಮುಂಡರಗಿ, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮುದ್ರಾ ಪಾಲ್ಗೊಂಡಿದ್ದರು.

Exit mobile version