Site icon Vistara News

Yadgiri News: ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಕಡ್ಡಾಯ, ಇಲ್ದಿದ್ರೆ ಲೈಸೆನ್ಸ್ ರದ್ದು!

Yadgiri DC Snehal R latest Meeting

ಯಾದಗಿರಿ: ಜಿಲ್ಲೆಯಲ್ಲಿ ಖನಿಜ (Minerals) ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಒನ್ ಸ್ಟೇಟ್ ಒನ್ ಜಿಪಿಎಸ್ (GPS) ಯೋಜನೆ ಅಡಿಯಲ್ಲಿ ಜಿಪಿಎಸ್ ಅಳವಡಿಸಬೇಕು. ಈ ಮೂಲಕ ಅಕ್ರಮ ಮರಳುಗಾರಿಕೆಗೆ (Illegal sand mining) ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಕಟ್ಟುನಿಟ್ಟಾಗಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಎಲ್ಲ ತರಹದ ಖನಿಜ ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಒಂದು ವೇಳೆ ಜಿಪಿಎಸ್ ಇಲ್ಲದಿರುವುದು ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಪರವಾನಗಿಯನ್ನು ರದ್ದು (Cancellation of license) ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇದನ್ನೂ ಓದಿ: Assembly Session: ರಾಜ್ಯದಲ್ಲಿ 40,000 ಪಶುಗಳಿಗೆ ಒಬ್ಬರೇ ವೈದ್ಯ!: ಕೊರತೆ ನೀಗಿಸುವಂತೆ ಬೈಂದೂರು ಶಾಸಕ ಆಗ್ರಹ

ಜಿಲ್ಲೆಯಲ್ಲಿ ಒಟ್ಟು 84 ಖನಿಜ ಸಾಗಾಣಿಕೆ ಮಾಡುವ ವಾಹನಗಳಿದ್ದು, ಇದರಲ್ಲಿ ಒಟ್ಟು 28 ವಾಹನಗಳಿಗೆ ಜಿಪಿಎಸ್ ಅಳವಡಿಕೆಯಿದೆ. ಇನ್ನುಳಿದ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಸೂಚಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸರ್ಕಾರದ ಮಾರ್ಗಸೂಚಿಯಂತೆ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಅವಕಾಶವಿಲ್ಲ. ಯಾವುದೇ ರೀತಿಯ ಮರಳು ಗಣಿಗಾರಿಕೆ ಚಟುವಟಿಕೆ ಕಂಡುಬಂದರೆ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮರಳನ್ನು ಲೋಕೋಪಯೋಗಿ ಇಲಾಖೆಯಿಂದ ವಿಲೇವಾರಿ ಮಾಡುವಂತೆ ಡಿಸಿ ಸೂಚಿಸಿದರು.

ಇದನ್ನೂ ಓದಿ: Education Guide : ವೈದ್ಯಕೀಯ ಶಿಕ್ಷಣ; ಹಲವು ಅವಕಾಶಗಳ ಆಗರ!

ವಡಿಗೇರಾ ತಾಲೂಕಿನ ಯಕ್ಷಂತಿ, ಚನ್ನೂರ್, ಕೊಂಕಲ್, ಕುಮಕನೂರ, ಗಡ್ಡೆಸೂಗೂರು, ಶಿವಪುರ, ಗೋನಾಲ, ಯಾದಗಿರಿ ತಾಲೂಕಿನ ಕೌಳೂರು, ಸುರಪುರ ತಾಲೂಕಿನ ಸೂಗೂರು, ಹೆಮ್ಮಡಗಿ, ಚೌಡೇಶ್ವರಿಹಾಳ, ಹೇಮನೂರ, ಶೆಳ್ಳಗಿ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಒಟ್ಟು 14 ಮರಳು ಬ್ಲಾಕ್ ಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪರ್ಮಿಟ್ ಇಲ್ಲದ ಮರಳು ಸಾಗಾಣಿಕೆ, ಮಿತಿಮೀರಿದ ಭಾರ ಹೊತ್ತು ಸಾಗುವ ವಾಹನಗಳ ಮೇಲೆ ತೀವ್ರ ನಿಗಾವಹಿಸಿ, ಪ್ರತಿಯೊಂದು ವಾಹನಗಳ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಒಂದು ವೇಳೆ ಸೂಕ್ತ ದಾಖಲಾತಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ವಾಹನ ಬಳಕೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಇದನ್ನೂ ಓದಿ: ವಿಸ್ತಾರ Explainer: Chandrayaan- 3; ಚಂದ್ರಯಾನ- 3ರ ವಿಶೇಷತೆಗಳು ಏನೇನು? ಏನಿದರ ಉದ್ದೇಶ?

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಡಾ. ಪುಷ್ಪಾವತಿ ಕೆ ಎನ್, ಹಟ್ಟಿ ಗಣಿಯ ವ್ಯವಸ್ಥಾಪಕ ವೆಂಕಟೇಶ ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಖಾಜಲ್ ಪಾಟೀಲ, ಡಿವೈಎಸ್ಪಿ ಬಸವೇಶ್ವರ , ಭೂ ವಿಜ್ಞಾನಿ ಕಿರಣ್, ಯಾದಗಿರಿ ತಹಶೀಲ್ದಾರ ಅಣ್ಣಾರಾವ್ ಪಾಟೀಲ, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ವಡಿಗೇರಾ ತಹಶೀಲ್ದಾರ ಅಲೀಮಾ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Exit mobile version