ಯಾದಗಿರಿ: ನಿಮ್ಮ ಪೆನ್ನಿನ ಬರವಣಿಗೆ ಆಲೋಚನೆಗಳಿಗಿಂತ ವೇಗವಾಗಿ ಇರಬೇಕು, ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿ, ಸತತ ಪರಿಶ್ರಮದ ಕಿಚ್ಚಿನಿಂದ ಸ್ಪರ್ಧಾತ್ಮಕ ಪರೀಕ್ಷೆ (Competitive Exam) ಎದುರಿಸಿದಾಗ ಮಾತ್ರ ಯಶಸ್ಸು (success) ಸಿಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕೌಶಲ ಮಿಷನ್ ಹಾಗೂ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಸಹಯೋಗದೊಂದಿಗೆ ನಗರದ ಮುದ್ನಾಳ್ ಕ್ರಾಸ್ ಬಳಿಯಿರುವ ಕನ್ನಡ ಭವನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Gruhalakshmi Scheme : ನಾಳೆಯಿಂದ ಗೃಹಲಕ್ಷ್ಮಿ ನೋಂದಣಿ ; ಅರ್ಜಿ ಹಾಕುವ ಮುನ್ನ ನೀವು ಈ ಕೆಲಸ ಮಾಡಬೇಕು
ಐಎಎಸ್/ಐಪಿಎಸ್/ಐಎಫ್ಎಸ್/ಐಆರ್‌ಎಸ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಹಂತಗಳನ್ನು ದಾಟಬೇಕು. ಈ ಪರೀಕ್ಷೆಯಲ್ಲಿನ ಪ್ರಶ್ನೆಗಳು ಕೆಲವೇ ವಿಷಯಗಳಿಗೆ ಸೀಮೀತವಾಗಿರುವುದಿಲ್ಲ. ರಾಜ್ಯ, ರಾಷ್ಟ್ರ, ಪ್ರಪಂಚದ ಜ್ಞಾನ ತಿಳಿದುಕೊಳ್ಳಬೇಕು. ಮುಖ್ಯಪರೀಕ್ಷೆಗೆ ಸಿದ್ಧರಾಗುವವರು ಇಂಗ್ಲಿಷ್ ಮತ್ತು ಕನ್ನಡದ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಿ. ಕೆಲವು ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಸಾಮಾನ್ಯ ಜ್ಞಾನ ಕೈಪಿಡಿಗಳು, ವ್ಯಕ್ತಿತ್ವ ವಿಕಾಸದ ಪುಸ್ತಕಗಳನ್ನು ಓದಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಾವುದೇ ಗುರಿ ತಪ್ಪಲ್ಲ. ಆದರೆ ಆ ನಿಮ್ಮ ಗುರಿ ದೊಡ್ಡದಾಗಿರಬೇಕು. ಗುರಿ ತಲುಪಲು ಹೆಚ್ಚು ಪರಿಶ್ರಮ, ಸಮಯಪಾಲನೆಯಿಂದ ಓದುವುದು ಬಹುಮುಖ್ಯವಾಗಿದ್ದು, ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನೀವು ಹುಡುಕಿಕೊಂಡು ಹೋಗಬೇಕು ಎಂದು ಹೇಳಿದರು.
ಇದನ್ನೂ ಓದಿ: Reliance Brands : ರಿಲಯನ್ಸ್ ತೆಕ್ಕೆಗೆ ಆಲಿಯಾ ಭಟ್ ಕಿಡ್ಸ್‌ವೇರ್ ಬ್ರಾಂಡ್
ನೀವು ಕಾಣುವ ಕನಸು ನಿದ್ದೆಯನ್ನು ಕೆಡಿಸಬೇಕು. ಜೀವನವು ಪ್ರತಿದಿನ ಹೊಸ ಸವಾಲುಗಳನ್ನು ನೀಡುತ್ತದೆ. ಅದನ್ನು ದಾಟಿದಾಗಲೇ ಯಶಸ್ಸನ್ನು ಪಡೆಯಲು ಸಾಧ್ಯ. ಜ್ಞಾನವನ್ನು ಹಂಚಿಕೊಂಡರೆ ಜ್ಞಾನ ಹೆಚ್ಚುತ್ತದೆ. ತಮ್ಮ ಮೇಲೆ ತಮಗೆ ಸಾಧನೆಯ ಆತ್ಮವಿಶ್ವಾಸವಿರಲಿ ಸಾಧನೆಗೆ ಯಾವುದೇ ಶಾರ್ಟ್ ಕಟ್ ದಾರಿಗಳು ಇಲ್ಲ. ಶ್ರಮ ವಹಿಸಬೇಕಾಗಿದೆ ಎಂದರು.
ವರ್ಷಪೂರ್ತಿ ಎಷ್ಟೇ ತಯಾರಿ ನಡೆಸಿದ್ದರೂ, ಪರೀಕ್ಷೆಗೂ ಮೊದಲಿನ ಆ 24 ಗಂಟೆಗಳನ್ನು ಸಮರ್ಪಕವಾಗಿ ದುಡಿಸಿಕೊಳ್ಳಬೇಕು. ಯಾರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೊ ಅವರ ಗೆಲುವು ಕೂಡ ಅಷ್ಟೇ ಅದ್ಭುತವಾಗಿರುತ್ತದೆ. ವರ್ಷದ ಶ್ರಮದೊಂದಿಗೆ ‘ಯೆಸ್ ನಾನು ಮಾಡಬಲ್ಲೆ! ಇದೆಲ್ಲವೂ ನನಗೂ ಗೊತ್ತು. ಇಷ್ಟನ್ನು ನಾನು ಬರೆಯಬೇಕು’ ಎಂಬ ಆತ್ಮವಿಶ್ವಾಸವನ್ನು ಸೇರಿಸಿಕೊಂಡು ಪರೀಕ್ಷೆ ಹೊರಟರೆ, ಆ ಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ ಎಂದರು.
ಇದನ್ನೂ ಓದಿ: Adhika Masa 2023 : ಇಂದಿನಿಂದ ಅಧಿಕಮಾಸ; ಹೇಗಿರಲಿದೆ ನಿಮ್ಮ ಭವಿಷ್ಯ?
ಈ ಸಂದರ್ಭದಲ್ಲಿ ಬೆಂಗಳೂರು ಸಾಧನಾ ಕೋಚಿಂಗ್ ಸೆಂಟರ್ ನ ನಿರ್ದೇಶಕಿ ಡಾ.ಜ್ಯೋತಿ ಕೆ.ಸಿ , ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಭುದೊರೆ, ಸಹಾಯಕ ಅಧಿಕಾರಿ ಬಸಪ್ಪ ಎಸ್ ತಳವಾಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.