ಯಾದಗಿರಿ: ಬೇಸಿಗೆ (Summer) ಕೊನೆ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗವು ಕೆಂಡದಂತಹ ಬಿಸಿಲಿಗೆ ತತ್ತರಿಸಿದೆ. ಅದರಲ್ಲೂ ಪ್ರಮುಖವಾಗಿ ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಉಷ್ಣಾಂಶ (Temperature) ದಾಖಲಾಗಿದೆ.
ಜಿಲ್ಲೆಯಲ್ಲಿ ಕೆಂಡದಂತಹ ತಾಪ ಹೆಚ್ಚಾಗಿರುವುದು ಪ್ರತಿಯೊಬ್ಬರನ್ನು ಕಂಗಾಲಾಗುವಂತೆ ಮಾಡಿದೆ, ಕಳೆದ ಒಂದು ವಾರದಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, 40 ರಿಂದ 45 ಡಿಗ್ರಿ ಸೆಲ್ಸಿಯಸ್ ವರಗೆ ಉಷ್ಣಾಂಶ ದಾಖಲಾಗಿದೆ. ಮೇ 18 ರಂದು 43 ಡಿಗ್ರಿ ಸೆಲ್ಸಿಯಸ್, ಮೇ 19 ರಂದು 45 ಡಿಗ್ರಿ ಸೆಲ್ಸಿಯಸ್ , ಮೇ 20 ರಂದು ಶನಿವಾರ ಕೂಡ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಇನ್ನು ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜಿಲ್ಲೆಯ ಜನರು ಹಾಗೂ ನವಜಾತ ಶಿಶುಗಳಿಗೆ ಅನಾರೋಗ್ಯ ಕಾಡುತ್ತಿದೆ.
ಇದನ್ನೂ ಓದಿ: ಶಿಕ್ಷಕರಿಗೂ ಬಂತು ಡ್ರೆಸ್‌ಕೋಡ್; ಟೀಚರ್‌ಗಳು ಇನ್ನು ಜೀನ್ಸ್, ಟಿ-ಶರ್ಟ್ ಧರಿಸಿ ಶಾಲೆಗೆ ಹೋಗುವಂತಿಲ್ಲ
ನಿರ್ಜಲೀಕರಣದಿಂದ ಬಳಲುತ್ತಿರುವ ಮಕ್ಕಳು
ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ನವಜಾತ ಶಿಶುಗಳಿಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. ಹೀಗಾಗಿ ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನವಜಾತ ಶಿಶುಗಳ ದಾಖಲಾತಿಯು ಹೆಚ್ಚಾಗಿದೆ. ಈ ಕುರಿತು ಮಾತನಾಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಾಮನಗೌಡ, ಕಳೆದ 5 ದಿನಗಳಲ್ಲಿ 26 ನವಜಾತ ಶಿಶುಗಳು ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕ (SNCU) ದಲ್ಲಿ ದಾಖಲಾಗಿದ್ದು, ಅದರಲ್ಲಿ 19 ನವಜಾತ ಶಿಶುಗಳು ಗುಣಮುಖವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮಕ್ಕಳ ವೈದ್ಯ ಡಾ.ಸಚಿನ್ ಮಾತನಾಡಿ, ಬಿಸಿಲು ಹೆಚ್ಚಾಗಿರುವುದರಿಂದ ಆರು ತಿಂಗಳೊಳಗಿನ ನವಜಾತ ಶಿಶುಗಳಿಗೆ ತಾಯಿ ಪದೇಪದೆ ಎದೆ ಹಾಲು ಕುಡಿಸಬೇಕು. ಬಿಸಿಲು ಹಾಗೂ ಬಿಸಿಲು ಗಾಳಿ ತಾಗದ ಹಾಗೆ ಸುರಕ್ಷತೆ ವಹಿಸಬೇಕು. ಬಿಸಿಲಿನಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: UPSC NDA NA Exam : ಸೇನಾಧಿಕಾರಿ ಹುದ್ದೆಗೆ ಎನ್‌ಡಿಎ-ಎನ್‌ಎ ಪರೀಕ್ಷೆ; ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ
ಮನೆಯಿಂದ ಹೊರಬಾರದ ಜನರು
ಕಳೆದ ಒಂದು ವಾರದಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ಮನೆಯಿಂದ ಹೊರ ಬರುತ್ತಿಲ್ಲ.
ತಂಪು ಪಾನೀಯಗಳ ಮೊರೆ
ದಿನೇದಿನೆ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಹಣ್ಣಿನ ಜ್ಯೂಸ್, ಎಳೆನೀರು, ಮಜ್ಜಿಗೆ ಸೇರಿ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ.
ಗುಡ್ಡದಿಂದ ಬಿಸಿ ಗಾಳಿ ಹೆಚ್ಚಳ
ಯಾದಗಿರಿ ಜಿಲ್ಲೆಯು ಗುಡ್ಡ ಬೆಟ್ಟಗಳಿಂದ ಕೂಡಿದ್ದು, ಬೆಟ್ಟಗಳು ಬಿಸಿಲಿಗೆ ಕಾದು ಬಿಸಿಲಿನ ತಾಪ ಹೊರ ಸೂಸುತ್ತಿರುವುದರಿಂದ ಜಿಲ್ಲೆಯಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿದೆ.
ಇದನ್ನೂ ಓದಿ: TCS World 10K : ನೂತನ ದಾಖಲೆ ನಿರ್ಮಿಸಲಿದೆ ಟಿಸಿಎಸ್ 10ಕೆ ಬೆಂಗಳೂರು
ಜಿಲ್ಲಾಧಿಕಾರಿಗಳ ಸಭೆ
ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಸಭೆ ನಡೆಸಿದರು. ಹೆಚ್ಚುತ್ತಿರುವ ಬೇಸಿಗೆ ತಾಪಮಾನದ ಬಗ್ಗೆ, ಬಿಸಿಗಾಳಿ ಪರಿಸ್ಥಿತಿ ನಿಭಾಯಿಸುವ ಕುರಿತು ಸಭೆ ನಡೆಸಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ ಕಾಶಿನಾಥ ನಾಟೇಕರ್ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದೆ. ಇದರಿಂದಾಗಿ ಮಧ್ಯಾಹ್ನದಿಂದ ಸಂಜೆವರೆಗೂ ಯಾರು ಹೊರಗಡೆ ಬರುತ್ತಿಲ್ಲ. ಬಿಸಿಲಿನ ಧಗೆಯಿಂದ ಉಂಟಾಗುವ ದಾಹ ನಿವಾರಿಸಿಕೊಳ್ಳಲು ತಂಪು ಪಾನೀಯ ಸೇವನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.