ಯಾದಗಿರಿ: ರಾಜ್ಯ ಸರ್ಕಾರವು (State Govt) ನುಡಿದಂತೆ ನಡೆದಿದೆ, ಐದು ಗ್ಯಾರಂಟಿ ಯೋಜನೆಗಳ (Guarantee Schemes) ಅನುಷ್ಠಾನಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರೂಗಳ ಅನುದಾನ ವ್ಯಯವಾಗಲಿದ್ದು,ಇದಕ್ಕಾಗಿ ಐತಿಹಾಸಿಕ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಎಲ್ಲ ಜನತೆಯ ವಿಶ್ವಾಸಕ್ಕೆ ಹಾಗೂ ಸಂತಸಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಹೊಸಳ್ಳಿ ರಸ್ತೆ ಪಕ್ಕದಲ್ಲಿರುವ ಜೆಸ್ಕಾಂ ನೌಕರರ ಸಭಾಂಗಣದಲ್ಲಿ ಗೃಹಜ್ಯೋತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಅವರು, ಗೃಹಜ್ಯೋತಿಯ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ರಾಜ್ಯ ಸರ್ಕಾರ ಬಂದ ತಕ್ಷಣ ಕೇವಲ ಎರಡು ತಿಂಗಳಲ್ಲಿಯೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೊಳಿಸಲು ಕೈಗೊಂಡಿರುವ ಕ್ರಮ ಐತಿಹಾಸಿಕ ಹೆಜ್ಜೆಯಾಗಿದೆ. ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ನಾಡಿನ ಜನತೆಗೆ ಗ್ಯಾರಂಟಿ ಯೋಜನೆಗಳು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತಿದ್ದು, ಅರ್ಹ ಫಲಾನುಭವಿಗಳೂ ಕೂಡ ಇದರ ಸದುಪಯೋಗ ಪಡೆಯುವಂತೆ ಅವರು ತಿಳಿಸಿದರು.
ಇದನ್ನೂ ಓದಿ: Beauty Product Awareness: ಆನ್‌ಲೈನ್‌ನಲ್ಲಿ ಬ್ಯೂಟಿ ಪ್ರಾಡಕ್ಟ್ ಆರ್ಡರ್ ಮಾಡುವಾಗ ಇದು ತಿಳಿದಿರಲಿ
ಗೃಹಜ್ಯೋತಿ ಯೋಜನೆಯಡಿಯಲ್ಲಿ ಸುಮಾರು 1.42 ಕೋ. ಕುಟುಂಬಗಳು ನೋಂದಣಿಯಾಗಿವೆ. ರಾಜ್ಯದ ಬಡ, ಮಧ್ಯಮ, ಹಾಗೂ ಶ್ರೀಮಂತ ವರ್ಗದವರಿಗೂ ತಲಾ 200 ಯೂನಿಟ್ ಉಚಿತ ವಿದ್ಯುತ್ ದೊರಕಿಸುವ ಮೂಲಕ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ಹಿತ ಕಾಪಾಡಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ 7 ಗಂಟೆ ನಿರಂತರ ವಿದ್ಯುತ್ ಸರಬರಾಜು ಸೌಲಭ್ಯ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಲು ಅವಶ್ಯಕ ಯೋಜನೆ ರೂಪಿಸಬೇಕು. ಸರ್ಕಾರ ದ ಮಟ್ಟದಲ್ಲಿಯೂ ಈ ಕುರಿತು ಸೂಕ್ತ ಕ್ರಮ ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಜನರ ಕಷ್ಟಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟದಲ್ಲಿದ್ದ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳು ನೆರವಾಗಿವೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಬಲತೆಗೆ ನೆರವಾಗಿದೆ ಎಂದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಓದಿ: NCC Training : ಎನ್‌ಸಿಸಿ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದಲ್ಲಿ ಐಟಿಐ ಸೆಂಟ್ರಲ್ ಶಾಲೆಯ NCC TEAM ಭಾಗಿ
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ತಲಾ 5 ಫಲಾನುಭವಿಗಳಿಗೆ ಶೂನ್ಯ ಬಿಲ್ ನೀಡಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ, ಜೆಸ್ಕಾಂ ಡಿ.ಟಿ. ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.