Site icon Vistara News

Yadgiri News: ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬಾಗಿನ ಅರ್ಪಣೆ

offering bagina for Basavasagar Reservoir by District In charge Minister

ಯಾದಗಿರಿ: ಈ ಬಾರಿಯೂ ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ ರೈತರಲ್ಲಿ (Farmers) ಮತ್ತು ಜನರಲ್ಲಿ (Peoples) ಆತಂಕವನ್ನು ದೂರ ಮಾಡಿದ್ದಾಳೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.

ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಮುಂಗಾರು ಆರಂಭದಲ್ಲಿ ವರುಣ ದೇವ ನಿರಾಸೆ ಮೂಡಿಸಿದ್ದರಿಂದ ರೈತರು ಆತಂಕದಲ್ಲಿದ್ದರು. ಈ ಬಾರಿ ಡ್ಯಾಂ ಭರ್ತಿ ಆಗದಿದ್ದರೆ ಬೆಳೆ ಬೆಳೆಯಲಾಗದ ಮತ್ತು ಕುಡಿಯಲು ನೀರು ಇಲ್ಲದೆ ಇರುವ ಆತಂಕವಿತ್ತು. ಆರಂಭದಲ್ಲಿ ಮುಂಗಾರು ಕೈಕೊಟ್ಟರೂ ಕಡೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂ ಭರ್ತಿಯತ್ತ ಸಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Gold Rate Today: ಬಂಗಾರದ ದರ ಯಥಾಸ್ಥಿತಿ, ಬೆಳ್ಳಿ ದರವೂ ಬದಲಾವಣೆ ಇಲ್ಲ

ಜಲಾಶಯ ಭರ್ತಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಆದರೆ ಈಗ ಸತತ ಒಳಹರಿವು ಹೆಚ್ಚಳವಾಗಿದ್ದರಿಂದ ಜಲಾಶಯ ಭರ್ತಿಯ ಬಗ್ಗೆ ಇದ್ದ ಆತಂಕ ಈಗ ಸರಿದಿದೆ. ಕುಡಿಯುವ ನೀರಿಗಾಗಿ, ರೈತರ ಜಮೀನುಗಳಿಗೆ ನೀರಾವರಿಗಾಗಿ ನೀರನ್ನು ಕಾಲುವೆಗಳ ಮೂಲಕ ಹರಿಸುವುದನ್ನು ಆರಂಭಿಸಲಾಗಿದೆ ಎಂದರು.

ನಾರಾಯಣಪುರ ಜಲಾಶಯದಿಂದ ಜುಲೈ 22 ರಿಂದ ಒಳ ಹರಿವು ಪ್ರಾರಂಭವಾಗಿದ್ದು ಇದುವರೆಗೆ 71.50 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ ಎಂದು ತಿಳಿಸಿದರು.

ಜಾಕ್ವೇಲ್ ಕಾಮಗಾರಿ ಪರಿಶೀಲನೆ

ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡಲು ಜಲಜೀವನ್ ಮೀಷನ್ ಯೋಜನೆಯಡಿ ನಡೆಯುತ್ತಿರುವ ಜಾಕ್ವೇಲ್ ಕಾಮಗಾರಿ ಪರಿಶೀಲಿಸಿದ ಸಚಿವರು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಬೂದಿಹಾಳ ಪೀರಾಪುರ ಯೋಜನೆ ವಿಸ್ತರಣಾ ಕಾಮಗಾರಿ ಪರಿಶೀಲಿಸಿ, ಬರುವ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಇದನ್ನೂ ಓದಿ: Prithvi Shaw: ಆಯ್ಕೆ ಸಮಿತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ; ಪೃಥ್ವಿ ಶಾ

ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ, ಹುಣಸಗಿ, ಕೆ.ಬಿ.ಜೆ.ಎನ್.ಎಲ್, ಮುಖ್ಯ ಅಭಿಯಂತರ ಆರ್. ಮಂಜುನಾಥ, ಕಾರ್ಯ ನಿರ್ವಾಹಕ ಅಭಿಯಂತರ ಪ್ರಕಾಶ ಮುದಗಲ್, ತಹಸೀಲ್ದಾರ್‌ ಬಸವಲಿಂಗಪ್ಪ ನಾಯ್ಕೋಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version