ಯಾದಗಿರಿ: ತುರ್ತು ನೆರವು ಅಗತ್ಯವಿರುವ ಮಕ್ಕಳಿಗೆ ರಕ್ಷಣೆಯನ್ನು (Protection for children) ಪಡೆಯಲು ಯಾದಗಿರಿ ಜಿಲ್ಲಾ ಮಟ್ಟದ ಮಕ್ಕಳ ಸಹಾಯವಾಣಿ (Helpline) (ಪೊಲೀಸ್ ಕಂಟ್ರೋಲ್ ರೂಂ) 9480803600 ಸಂಖ್ಯೆಗೆ ಅಥವಾ 112 ನಂಬರಿಗೂ ಕರೆಮಾಡುವ ಮೂಲಕ ಸಾರ್ವಜನಿಕರು (Public) ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಜಿಲ್ಲಾ ಮಕ್ಕಳ (ಕಲ್ಯಾಣ) ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳ ಸಹಾಯವಾಣಿ 1098 ಸಂಖ್ಯೆಯೂ ರಾಷ್ಟ್ರ ವ್ಯಾಪ್ತಿಯೂ ಚಾಲ್ತಿಯಲ್ಲಿರುವುದರಿಂದ ಕರೆ ಮಾಡಿದಾಗ ಸಂಪರ್ಕವು ಕಾರ್ಯನಿರತವಾಗಿದೆ ಎಂಬ ಸಿಗ್ನಲ್ ಬಂದರೆ ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದ ಕರೆ ಸ್ವೀಕೃತವಾಗದಿದ್ದರೆ ಜಿಲ್ಲಾ ಮಟ್ಟದ ಸಹಾಯವಾಣಿಯ ನಂಬರಿಗೂ ಕರೆಮಾಡುವ ಮೂಲಕ ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ತುರ್ತು ನೆರವು ಅಗತ್ಯವಿರುವ ಮಕ್ಕಳು ರಕ್ಷಣೆಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ: Gruhajyoti scheme : ಉಚಿತ ವಿದ್ಯುತ್‌ಗೆ ನೀವಿನ್ನೂ ಅರ್ಜಿ ಹಾಕಿಲ್ಲವೇ? ಜುಲೈ 27 ಲಾಸ್ಟ್ ಡೇಟ್!
ಮಕ್ಕಳ ಸಹಾಯವಾಣಿಯು ಸಂಕಷ್ಟದಲ್ಲಿರುವ ಮಕ್ಕಳ ಪಾಲಿನ ಸಂಜೀವಿನಿಯಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಶ್ರಮಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದರು.
ಶಾಲೆಯಿಂದ ಹೊರಗುಳಿದು ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಮತ್ತು ವಂಚಿತರಾಗಲು ಕಾರಣಗಳನ್ನು ಹುಡುಕಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಿ, ಪ್ರತಿದಿನ ಬೆಳಗಿನ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳಿಗೆ ಸಮಸ್ಯೆಯಾದರೆ 1098 ಅಥವಾ 112 ಸಂಖ್ಯೆಗೆ ಕರೆ ಮಾಡುತ್ತೇವೆ ಎಂಬ ಧ್ಯೇಯವಾಕ್ಯದೊಂದಿಗೆ ಶಪಥ ಮಾಡುವಂತೆ ರೂಢಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮಕ್ಕಳ ಸಹಾಯವಾಣಿಯು ಬಾಲ್ಯ ವಿವಾಹ, ಬಾಲಕಾರ್ಮಿಕರು, ಭಿಕ್ಷಾಟನೆ, ಮಕ್ಕಳ ಮಾರಾಟ, ಕಾಣೆಯಾದ ಮಕ್ಕಳು, ನಿರ್ಗತಿಕ ಮಕ್ಕಳು, ಬೀದಿ ಮಕ್ಕಳು, ವಲಸೆ ಮಕ್ಕಳು, ವಿಕಲ ಚೇತನ ಮಕ್ಕಳು, ಮಾದಕ ವಸ್ತುಗಳ ವ್ಯಸನಿ ಮಕ್ಕಳು, ಹಿಂಸೆ ಮತ್ತು ದೌರ್ಜನ್ಯಕ್ಕೆ ಒಳಗಾದ 18 ವರ್ಷ ದೊಳಗಿನ ಸಂಕಷ್ಟದಲ್ಲಿ ಸಿಲುಕಿರುವ /ರಕ್ಷಣೆ ಮತ್ತು ಪೋಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು ಮಕ್ಕಳ ಸಹಾಯವಾಣಿ ಸೇವೆ 1098, 112 ಅಥವಾ ಜಿಲ್ಲಾ ಮಟ್ಟದ ಸಂಖ್ಯೆ 9480803600 ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ: Wimbledon 2023: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ
ಯಾದಗಿರಿ ಜಿಲ್ಲೆಯಲ್ಲಿ 2021 ರಿಂದ 22 ವರೆಗೆ ಶಹಾಪುರ 35, ಸುರಪುರ 18, ಯಾದಗಿರಿ 32, ಗುರುಮಿಠಕಲ್ 13 ಒಟ್ಟು 98 ಬಾಲ್ಯ ವಿವಾಹ ಮತ್ತು 2022 ರಿಂದ 2023 ರವರೆಗೆ ಶಹಾಪುರ 24, ಸುರಪುರ 25, ಯಾದಗಿರಿ 10, ಗುರುಮಿಠಕಲ್ 16 ಸೇರಿ ಒಟ್ಟು 75 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬಾಲ್ಯ ವಿವಾಹವು ಕಾನೂನು ಅಪರಾಧ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಿ. ಬಾಲ್ಯ ವಿವಾಹ ಜರುಗುವ ಜಿಲ್ಲೆಯ ಎಲ್ಲಾ ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಆಯೋಜಕರಿಗೆ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ನಾಮಫಲಕ ಹಾಕುವಂತೆ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಸಂಕಷ್ಟದಲ್ಲಿರುವ ಮಕ್ಕಳ ವೈದ್ಯಕೀಯ ತಪಾಸಣೆಗೆ ಮತ್ತು ಚಿಕಿತ್ಸೆಗೆ ಹಾಗೂ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಿಷನ್ ವಾತ್ಸಲ್ಯ ಯೋಜನೆ ಮಾರ್ಗಸೂಚಿ ಅನ್ವಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಕ್ಕಳ ( ಕಲ್ಯಾಣ) ರಕ್ಷಣಾ ಸಮಿತಿಯನ್ನು ರಚಿಸಲಾಯಿತು.
ಇದನ್ನೂ ಓದಿ: IND vs WI: ನೂತನ ಮೈಲಿಗಲ್ಲಿನ ಸನಿಹದಲ್ಲಿ ಆರ್. ಅಶ್ವಿನ್
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಹೊನಲೆ, ಸಿಇಓ ಗರಿಮಾ ಪನ್ವಾರ, ಎಸ್ಪಿ ಡಾ.ಸಿ.ಬಿ ವೇದಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಕೆ, ಮಕ್ಕಳ ರಕ್ಷಣಾಧಿಕಾರಿ ದಶರಥ ನಾಯಕ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ, ಡಿಎಚ್ಓ ಡಾ. ಗುರುರಾಜ ಹಿರೇಗೌಡ, ನಗರಸಭೆ ಆಯುಕ್ತ ಸಂಗಪ್ಪ ಉಪಾಸೆ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಹಣಮಂತ್ರಾಯ ಕರಡಿ, ಚಂದ್ರಶೇಖರ ಲಿಂಗದಳ್ಳಿ, ಬಸವರಾಜ ಪಾಟೀಲ, ಮಾಳಪ್ಪ ಹೊರಟೂರು, ಮಕ್ಕಳ ಸಹಾಯವಾಣಿ ನಿರ್ದೇಶಕರು , ಸಿಬ್ಬಂದಿ ಇದ್ದರು.