ಯಾದಗಿರಿ: ನಾಗರ ಪಂಚಮಿಯ (Nagara panchami) ದಿನದಂದು ನಾಗರ ಮೂರ್ತಿಗೆ ಹಾಲೆರೆದು ಪೂಜಿಸುವುದನ್ನು ಕಾಣುತ್ತೇವೆ. ಆದರೆ ಪಂಚಮಿಯ ದಿನವೇ ಇಲ್ಲೊಂದು ಊರಲ್ಲಿ ಚೇಳುಗಳಿಗೆ (Scorpions) ಪೂಜಿಸಿ ಆರಾಧಿಸುತ್ತಾರೆ, ಇದು ಅಚ್ಚರಿ ಎನಿಸಿದರೂ ಸತ್ಯ!
ಹೌದು, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ನಾಗರ ಪಂಚಮಿಯ ದಿನದಂದು ಚೇಳುಗಳಿಗೆ ಪೂಜಿಸಿ, ಆರಾಧಿಸಲಾಗುತ್ತದೆ, ನಿಜವಾದ ಚೇಳುಗಳನ್ನು ಕೈಮೇಲೆ, ಮೈಮೇಲೆ, ಬಾಯಲ್ಲಿ ಹಾಕಿಕೊಂಡು ಜಾತ್ರೆಯಲ್ಲಿ ಸಂಭ್ರಮ ಪಡುತ್ತಾರೆ. ವಿಷ ಜಂತುಗಳ ಜತೆ ಯಾವುದೇ ಭಯವಿಲ್ಲದೇ ಚಿಣ್ಣರು, ಮಹಿಳೆಯರು, ದೊಡ್ಡವರು ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ಚೇಳುಗಳ ಜಾತ್ರೆ ನಡೆಯುತ್ತದೆ. ಗ್ರಾಮದ ಬೆಟ್ಟದ ಮಧ್ಯೆ ಕೊಂಡಮೇಶ್ವರಿ ದೇವಿಯ ದೇವಾಲಯವಿದೆ, ನಾಗರ ಪಂಚಮಿ ದಿನದಂದು ನಡೆಯುವ ಈ ದೇವಿಯ ಚಾತ್ರೆಗೆ ಇಲ್ಲಿ ಸಾವಿರಾರು ಚೇಳುಗಳು ಬಂದು ಸೇರುತ್ತವೆ. ಭಕ್ತರು ಬೆಟ್ಟದ ಮೇಲೆ ಆಗಮಿಸಿ ದೇವಿಯ ದರ್ಶನ ಪಡೆದು ನಂತರ ಸುತ್ತಲಿನ ಗುಡ್ಡದಲ್ಲಿ ಹೇರಳವಾಗಿ ಸಿಗುವ ಚೇಳುಗಳನ್ನು ಹಿಡಿದು ಸಂಭ್ರಮಪಡುತ್ತಾರೆ.
ಇದನ್ನೂ ಓದಿ: Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ
ಈ ಬಗ್ಗೆ ಭಕ್ತ ಗುರುರಾಜ ಪಟ್ಟಣಶೆಟ್ಟಿ ಮಾತನಾಡಿ, ನಾಡಿನೆಲ್ಲೆಡೆ ನಾಗರ ಮೂರ್ತಿಗೆ ಪೂಜಿಸಿ ಹಾಲು ಎರೆದರೆ ಇಲ್ಲಿ ಚೇಳುಗಳಿಗೆ ಪೂಜಿಸಿ, ಆರಾಧಿಸಿ ಮೈ ಮೇಲೆ ಚೇಳುಗಳನ್ನು ಹಾಕಿಕೊಂಡು ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ ಎಂದು ತಿಳಿಸಿದರು.
ಮಕ್ಕಳು, ಮಹಿಳೆಯರು, ಯುವಕರು ಕಲ್ಲುಗಳಲ್ಲಿ ಅಡಗಿರುವ ಹಾಗೂ ಓಡಾಡಿಕೊಂಡಿರುವ ಚೇಳುಗಳನ್ನು ಯಾವುದೇ ಆತಂಕವಿಲ್ಲದೇ ಭಕ್ತಿಯ ಪರಾಕಾಷ್ಠೆಯಿಂದ ಹಿಡಿದುಕೊಳ್ಳುತ್ತಾರೆ. ನಾಗರ ಪಂಚಮಿ ದಿನದಂದೆ ಚೇಳುಗಳು ಕಾಣಸಿಗುತ್ತವಂತೆ, ಜತೆಗೆ ಪಂಚಮಿ ದಿನ ಯಾರಿಗೂ ಅವು ಕಚ್ಚುವುದಿಲ್ಲ. ಕೈಯಲ್ಲಿ ಚೇಳುಗಳನ್ನು ಹಿಡಿದುಕೊಂಡು ಮಕ್ಕಳು, ಯುವಕರು ಪ್ರತಿಯೊಬ್ಬರು ಪೊಟೋ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿರುವುದು ಕಂಡುಬಂದಿತು.
ಈ ಬಗ್ಗೆ ಭಕ್ತಾದಿ ಸಪ್ನಾ ಮಾತನಾಡಿ, ಪ್ರತಿವರ್ಷ ಕೊಂಡಮಾಯಿ ದೇವರ ಜಾತ್ರೆ ನಿಮಿತ್ತ ಚೇಳುಗಳ ಜಾತ್ರೆ ನಡೆಯುತ್ತದೆ. ದೇವರ ಶಕ್ತಿಯಿಂದ ಜಾತ್ರೆ ದಿನ ಚೇಳುಗಳು ಕಡಿದರೂ ಏನೂ ಆಗುವುದಿಲ್ಲ ಎಂದು ಹೇಳಿದರು.
ನಾಗರ ಪಂಚಮಿಯಂದು ಎಲ್ಲೆಡೆ ನಾಗದೇವರ ಮೂರ್ತಿಗೆ ಹಾಲೆರೆಯುತ್ತಾರೆ. ಆದರೆ ಕೊಂಡಮ್ಮದೇವಿಯ ದೇವಸ್ಥಾನದಲ್ಲಿ ಮಾತ್ರ ಚೇಳುಗಳಿಗೆ ಪೂಜಿಸಿ ನಿಜ ಚೇಳುಗಳನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಜಾತ್ರೆಯ ವಿಶೇಷವಾಗಿದೆ.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಅಲ್ಪ ಮಳೆ; ಅಲ್ಲಲ್ಲಿ ಬೀಸಲಿದೆ ಬಿರುಗಾಳಿ
ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು
ಜಾತ್ರೆಗೆ, ಜಿಲ್ಲೆಯ ವಿವಿಧ ಕಡೆ ಹಾಗೂ ತೆಲಂಗಾಣ, ಆಂಧ್ರ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಆಗಮಿಸಿ ಸಂಭ್ರಮಪಡುತ್ತಾರೆ. ಸಾಮರಸ್ಯದ ಸಂಕೇತವೆಂಬಂತೆ ಸರ್ವ ಸಮುದಾಯದ ಭಕ್ತರು ಆಗಮಿಸಿ ಖುಷಿ ಪಡುತ್ತಾರೆ.