ಯಾದಗಿರಿ: ತಾಲೂಕಿನ ಪ್ರಸಿದ್ಧ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು (Sri Mylaralingeshwar Jatra Mahotsava) ಭಾನುವಾರ ಲಕ್ಷಾಂತರ ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಮೈಲಾಪುರದ ಮಲ್ಲಯ್ಯನ ಜಾತ್ರೆಗೆ ಬೆಳಿಗ್ಗೆಯಿಂದಲೇ ಮೈಲಾಪುರಕ್ಕೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ತಂಡೋಪತಂಡವಾಗಿ ಆಗಮಿಸಿ, ಶ್ರೀ ಮೈಲಾರಲಿಂಗೇಶ್ವರನ ದರ್ಶನ ಪಡೆದರು.
ಭಾನುವಾರ ಬೆಳಿಗ್ಗೆ ಭಕ್ತರು ಪವಿತ್ರ ಹೊನ್ನಕೆರೆಯಲ್ಲಿ ಪುಣ್ಯಸ್ನಾನ ಮಾಡಿ, ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ 12 ರ ನಂತರ ಸಂಪ್ರದಾಯದಂತೆ ದೇವಸ್ಥಾನಕ್ಕೆ ನೆರೆಯ ಹಳಗೇರಾ, ಹೊಸಳ್ಳಿ ಗ್ರಾಮಗಳಿಂದ ಭಕ್ತರ ತಂಡ ಆಗಮಿಸಿ, ಮೈಲಾಪುರದ ಭಕ್ತರ ಜತೆ ಸೇರಿ ಮಲ್ಲಯ್ಯನ ಬೆಟ್ಟವನ್ನು ಏರಿ ಮಲ್ಲಯ್ಯನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು, ಮಲ್ಲಯ್ಯನ ಕುದುರೆಯನ್ನು ವಿವಿಧ ಸಂಗೀತ ವಾದ್ಯಗಳೊಂದಿಗೆ ಮೆರೆವಣಿಗೆ ಮೂಲಕ ಹೊನ್ನಕೆರೆಗೆ ಗಂಗಾಸ್ನಾನಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ಆಗಮಿಸಿದ ಭಕ್ತರು ಭಂಡಾರ, ಕಾಣಿಕೆ ಹಾಗೂ ರೈತಾಪಿ ವರ್ಗ ತಮ್ಮ ಜಮೀನಿನಲ್ಲಿ ಬೆಳೆದ ಜೋಳ, ಶೇಂಗಾ ಹಾಗೂ ಇನ್ನಿತರ ಪದಾರ್ಥಗಳನ್ನು ಶ್ರದ್ಧಾ ಭಕ್ತಿಯಿಂದ ಅರ್ಪಿಸಿ, “ಶಿವ ಏಳು ಕೋಟಿ ಕೋಟಿಗೆ” “ಮೈಲಾರಲಿಂಗ ಮಹಾರಾಜಕೀ ಜೈ” ಎಂದು ಮಲ್ಲಯ್ಯನಿಗೆ ಜೈಕಾರ ಹಾಕುತ್ತಾ ತಮ್ಮ ಭಕ್ತಿ ಭಾವ ಮೆರೆದರು.
ಇದನ್ನೂ ಓದಿ: IndiGo Flight: ವಿಮಾನ ಹಾರಾಟ ವಿಳಂಬ ಎಂದು ಪೈಲಟ್‌ಗೆ ಹೊಡೆದ ಪ್ರಯಾಣಿಕ; ವಿಡಿಯೊ ಇಲ್ಲಿದೆ
ಹೊನ್ನಕೆರೆಯಲ್ಲಿ ಮೈಲಾರಲಿಂಗೇಶ್ವರ ಮೂರ್ತಿಗೆ ಮತ್ತು ಕುದುರೆಗೆ ಭಕ್ತರು ಎಳ್ಳು-ಬೆಲ್ಲ ಹಚ್ಚಿ ಗಂಗಾಸ್ನಾನ ಮಾಡಿಸಿ, ಬಳಿಕ ಪಲ್ಲಕ್ಕಿ ಮರಳಿ ದೇವಸ್ಥಾನ ಮೆಟ್ಟಿಲು ಹತ್ತಿರ ಬರುತ್ತಿದಂತೆಯೇ ಮುಖ್ಯದ್ವಾರದಲ್ಲಿರುವ ಹಾಲಗಂಬಕ್ಕೆ ಕಟ್ಟಿರುವ ಕಬ್ಬಿಣದ ಸರಪಳಿಯನ್ನು ವಗ್ಗರು ಹರಿಯುವುದನ್ನು ನೋಡಲು ಜನಸಾಗರವೇ ಸೇರಿತು. ನಂತರ ಬೆಟ್ಟದ ಮೇಲೆ ಇರುವ ದೇವಾಲಯಕ್ಕೆ ಪಲ್ಲಕ್ಕಿಯನ್ನು ತೆಗೆದುಕೊಂಡು ಹೋಗಿ ಮೂಲ ಸ್ಥಳದಲ್ಲಿ ಅರ್ಚಕರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು.
ವಿವಿಧ ಭಾಗಗಳಿಂದ ಮಲ್ಲಯ್ಯನ ವಗ್ಗರು ಆಗಮಿಸಿ, ಹಾಡನ್ನು ಹಾಡುತ್ತಾ ನೃತ್ಯ ಮಾಡಿ ಮಲ್ಲಯ್ಯನ ಭಕ್ತಿ ಮೆರೆದರು.
ಮೈಲಾರಲಿಂಗೇಶ್ವರ ದೇವರ ಪಲ್ಲಕ್ಕಿಯ ಮೇಲೆ ಕುರಿಗಳನ್ನು ಎಸೆಯುವ ಸಂಪ್ರದಾಯ ಪಾಲನೆ ಮಾಡಿಕೊಂಡು ಬರಲಾಗುತಿತ್ತು. ಆದರೆ ಜಿಲ್ಲಾಡಳಿತ ಕುರಿಗಳನ್ನು ಪಲ್ಲಕ್ಕಿ ಮೇಲೆ ಎಸೆಯುವುದನ್ನು ನಿಷೇಧ ಮಾಡಿತ್ತು.
6 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು. ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಕುರಿಗಳನ್ನು ಜಿಲ್ಲಾಡಳಿತ ದೇವರಿಗೆ ಕಾಣಿಕೆ ರೂಪದಲ್ಲಿ ಪಡೆಯುವ ಸಂಪ್ರದಾಯ ಆಚರಣೆ ಮಾಡಿಕೊಂಡು ಬಂದಿದೆ. ಈ ಬಾರಿ ಭಕ್ತರಿಂದ 400 ಕ್ಕೂ ಹೆಚ್ಚು ಕುರಿ ಮರಿಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲಾಗಿದೆ.
ಇದನ್ನೂ ಓದಿ: Box Office Collection: ದೊಡ್ಡ ಚಿತ್ರಗಳ ನಿದ್ದೆಗೆಡಿಸಿ ಮ್ಯಾಜಿಕ್ ಮಾಡಿದ ‘ಹನುಮಾನ್’; ವಾರಾಂತ್ಯದ ಗಳಿಕೆ ಎಷ್ಟು?
ಈ ಬಗ್ಗೆ ಯಾದಗಿರಿ ತಹಸೀಲ್ದಾರ್ ಸುರೇಶ್ ಅಂಕಲಗಿ ಮಾತನಾಡಿ, ಡಿಸಿ ಅವರ ಸೂಚನೆಯಂತೆ ಜಾತ್ರೆಯಲ್ಲಿ ಭಕ್ತರಿಗೆ ಸಮಸ್ಯೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಯ್ಯ ಜಾತ್ರೆಯು ಖ್ಯಾತಿ ಹೊಂದಿದೆ. ಶಾಂತಿಯುತವಾಗಿ ಜಾತ್ರೆಯು ಜರುಗಿದೆ ಎಂದರು.