ಬೆಂಗಳೂರು: ಯಕ್ಷಗಾನದಿಂದ ಕನ್ನಡ ಭಾಷೆಯು ಇನ್ನಷ್ಟು ಜೀವಂತವಾಗಿರುತ್ತದೆ, ದೈಹಿಕ ಮಾನಸಿಕ ಸ್ವಾಸ್ಥ್ಯ ಕಾಪಾಡುವುದರಲ್ಲಿ ಯಕ್ಷಗಾನ ಅತ್ಯಂತ ಪ್ರಯೋಜನಕಾರಿ ಎಂದು ಶಾಸಕ ರವಿ ಸುಬ್ರಹ್ಮಣ್ಯ ಹೇಳಿದರು.
ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸೃಷ್ಟಿ ಕಲಾ ವಿದ್ಯಾಲಯದ 23ನೇ ಸೃಷ್ಟಿ ಸಂಭ್ರಮದಲ್ಲಿ (Srushti Sambhrama) ಪ್ರಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭು (ಗುಂಡ) ಅವರಿಗೆ ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸೃಷ್ಟಿ ಕಲಾವಿದ್ಯಾಲಯವು ನಿರಂತರ ಯಕ್ಷಗಾನ ತರಬೇತಿ, ಕಲಾಸೇವೆ ಮೂಲಕ ಬಸವನಗುಡಿ ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿ ಸ್ವೀಕರಿಸಿದ ಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭು (ಗುಂಡ) ಅವರು, ಸೃಷ್ಟಿಯ ಈ ಪ್ರಶಸ್ತಿ ನನ್ನ ಕಲಾ ಬದುಕಿನಲ್ಲಿ ಅತ್ಯಂತ ಮಹತ್ವದ್ದು ಹಾಗೂ ಮರೆಯಲಾರದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಬ್ರಾಯ ಹೆಬ್ಬಾರ್ ಮತ್ತು ಭರತ್ ರಾಜ್ ಪರ್ಕಳ ನಿರ್ದೇಶನದಲ್ಲಿ ನಿತ್ಯಾನಂದ ನಾಯಕ್ ಪರಿಕಲ್ಪನೆಯಲ್ಲಿ ಸೃಷ್ಟಿ ಕಲಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಕುಮಾರ ವಿಜಯ ಯಕ್ಷಗಾನ ಪ್ರದರ್ಶನ ಗೊಂಡಿತು.
ಸೃಷ್ಟಿ ಅಧ್ಯಕ್ಷ ಛಾಯಾಪತಿ ಕಂಚಿಬೈಲ್, ಗೌರವಾಧ್ಯಕ್ಷ ಶ್ರೀಕಾಂತ್ ಎಂ.ಜಿ., ಕಲಾವಿದರಾದ ಸುಬ್ರಾಯ ಹೆಬ್ಬಾರ್, ಅಕ್ಷಯ ಆಚಾರ್ಯ, ಅರ್ಜುನ್ ಕೊರ್ಡೇಲ್ ಮತ್ತಿತರರು ಇದ್ದರು.