ಬೆಂಗಳೂರು: ಯಕ್ಷಲೋಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉಡುಪಿಯಲ್ಲಿ 2023ರ ಫೆಬ್ರವರಿ ೧೧ ಮತ್ತು ೧೨ರಂದು ರಾಜ್ಯಮಟ್ಟದ “ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ” (Yakshagana Sammelana) ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಕರಾವಳಿ ಜಿಲ್ಲೆಗಳ ಗಂಡುಕಲೆ ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ಅವಲೋಕಿಸುವ ಸಲುವಾಗಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸಮ್ಮೇಳನ ಆಯೋಜಿಸುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಿ ಸಮಾನ ಸಿದ್ಧತೆ ಹಾಗೂ ಗುಣಮಟ್ಟದೊಂದಿಗೆ ಯಕ್ಷಗಾನ ಸಮ್ಮೇಳನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಕ್ಷಗಾನ ರಂಗದ ಘನ ವಿದ್ವಾಂಸರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಯಕ್ಷಗಾನದ ಸಮಸ್ಯೆ, ಸಾಧನೆಗಳ ಬಗ್ಗೆ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಫೆಬ್ರವರಿ ೧೧ ಹಾಗೂ ೧೨ರಂದು ಅಹೋರಾತ್ರಿ ಯಕ್ಷಗಾನ ಪ್ರದರ್ಶನ, ಗೋಷ್ಠಿ, ತಾಳಮದ್ದಳೆ, ಪುಸ್ತಕ ಮಾರಾಟ ನಡೆಯುತ್ತದೆ. ತೆಂಕು, ಬಡಗು, ಮೂಡಲಪಾಯ ಸೇರಿದಂತೆ ಯಕ್ಷಗಾನದ ಎಲ್ಲ ಪ್ರಭೇದಗಳಿಂದ ಪ್ರದರ್ಶನ ನಡೆಸಲಾಗುತ್ತದೆ. ಮೇಳ ಹಾಗೂ ಕಲಾವಿದರ ಸಮಸ್ಯೆ ಬಗ್ಗೆ ಪ್ರತ್ಯೇಕ ಗೋಷ್ಠಿ ಆಯೋಜಿಸಲಾಗಿದೆ.
ಇದನ್ನೂ ಓದಿ | ಜೋಳಿಗೆ ಹಿಡಿದ ಮಹಾನುಭಾವ ಎಂದ HDK, ಏ ಪಂಚೆ ಎಂದ ಇಬ್ರಾಹಿಂ: ಬಿ.ಎಲ್. ಸಂತೋಷ್ ವಿರುದ್ಧ ದಳಪತಿಗಳು ಗರಂ
ನಿಮ್ಮ ಮುಖಕ್ಕೆ ಬಣ್ಣ ಬೇಕೆ ?
ಸಮ್ಮೇಳನದ ಭಾಗವಾಗಿ ನಿಮ್ಮ ಮುಖಕ್ಕೆ ಬಣ್ಣ ಬೇಕೇ ಎಂಬ ವರ್ಣ ವೈಭವ ಆಯೋಜಿಸಲಾಗಿದೆ. ಆಸಕ್ತರಿಗೆ ತೆಂಕು- ಬಡಗು ಶೈಲಿಯಲ್ಲಿ ಬಣ್ಣ ಹಚ್ಚಿ ವೇಷ ಕಟ್ಟಲಾಗುತ್ತದೆ. ಒಟ್ಟಾರೆಯಾಗಿ ಒಂದು ಸಾಹಿತ್ಯ ಸಮ್ಮೇಳನವು ಯಾವ ರೀತಿ ಆಯೋಜನೆಗೊಳ್ಳುತ್ತದೋ ಅದೇ ರೀತಿ ಯಕ್ಷಗಾನ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.
ಸನ್ಮಾನ: ಕಾರ್ಯಕ್ರಮದ ಭಾಗವಾಗಿ ಯಕ್ಷರಂಗದ ಮೇಳದ ಯಜಮಾನರಿಗೆ, ಪಿಎಚ್.ಡಿ ಪ್ರಬಂಧ ಮಂಡಿಸಿದವರಿಗೆ ಹಾಗೂ ಬಡ ಕಲಾವಿದರಿಗೆ ಸನ್ಮಾನಿಸಲು ನಿರ್ಧರಿಸಲಾಗಿದೆ. ಸ್ವಾಗತ ಸಮಿತಿ, ವೇದಿಕೆ, ಆಹಾರ, ಮೂಲಸೌಕರ್ಯಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ಯಕ್ಷಗಾನ ರಾಜ್ಯದ ಗಂಡುಕಲೆ. ಈ ಕಲಾಪ್ರಕಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಯಕ್ಷಗಾನ ಸಮ್ಮೇಳನವನ್ನು ಕನ್ನಡ-ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದೆ. ಯಕ್ಷಗಾನದ ಎಲ್ಲ ಪ್ರಕಾರಗಳ ಶ್ರೀಮಂತ ಕಲಾ ಪ್ರದರ್ಶನದ ಜತೆಗೆ ವಿದ್ವಜ್ಜನ ಮೆಚ್ಚುವ ರೀತಿ ಸಮ್ಮೇಳನ ನಡೆಸುತ್ತೇವೆ.
| ವಿ.ಸುನಿಲ್ ಕುಮಾರ್, ಕನ್ನಡ-ಸಂಸ್ಕೃತಿ ಮತ್ತು ಇಂಧನ ಸಚಿವ
ಇದನ್ನೂ ಓದಿ | Karnataka Election | ರಸ್ತೆ ಮಾಡಿಲ್ಲವೆಂದು ಚುನಾವಣೆ ಬಹಿಷ್ಕರಿಸಿದ ಹಾಡುಗಾರ ಗ್ರಾಮಸ್ಥರು; ಕಾಂಗ್ರೆಸ್, ಬಿಜೆಪಿಗೂ ಗುಡ್‌ಬೈ