Site icon Vistara News

Yallapura News: ಪಶ್ಚಿಮ ಘಟ್ಟದ ವೈಶಿಷ್ಟ್ಯತೆ ತಿಳಿಯಲು ಅರಣ್ಯ ಇಲಾಖೆಯಿಂದ ಭೂ ದೃಶ್ಯ ಯಾತ್ರೆ

Earth View Expedition forest department yallapura

ಯಲ್ಲಾಪುರ: ಯಾವುದೇ ರೀತಿಯ ಅಧ್ಯಯನಕ್ಕೆ ನಮ್ಮ ಪರಿಸರವೇ ಮೂಲವಾಗಿರುತ್ತದೆ. ಯಲ್ಲಾಪುರ ಅರಣ್ಯ ನಿತ್ಯ ಹರಿದ್ವರ್ಣದಿಂದ ಹಿಡಿದು ಕುರುಚಲು ಅರಣ್ಯವನ್ನು ಹೊಂದಿರುವ ವಿವಿಧತೆಯಲ್ಲಿ ಸಾಮ್ಯತೆ ಕಾಣುವ ಪಶ್ಚಿಮ ಘಟ್ಟದ ವೈಶಿಷ್ಟ್ಯತೆಯ ಪರಿಚಯವಾಗಬೇಕು ಎಂಬ ಉದ್ದೇಶದಿಂದ ಈ ಭೂ ದೃಶ್ಯ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಹೇಳಿದರು.

ಅರಣ್ಯ ಇಲಾಖೆಯ ವತಿಯಿಂದ ಪಟ್ಟಣದ ಅರಣ್ಯ ಸಸ್ಯೋದ್ಯಾನದಲ್ಲಿ ಆಯೋಜಿಸಿದ್ದ ಎರಡು ದಿನದ ಭೂ ದೃಶ್ಯ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾತ್ರೆಗೆ ತೆರಳುತ್ತಿರುವ ತಂಡದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪತ್ರಕರ್ತರು, ಸಮಾಜ ಸೇವಕರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ೩೦ಕ್ಕೂ ಅಧಿಕ ಜನರು ಇರುವುದರಿಂದ ಅರಣ್ಯ ಇಲಾಖೆ, ಅರಣ್ಯ ಕೌತುಕದ ಕುರಿತು ಆಸಕ್ತಿ ಹಾಗೂ ಸಂರಕ್ಷಣೆಯ ಜಾಗೃತಿ ಮೂಡಿಸುವ ಕಾರ್ಯ ಇವರ ಸಹಭಾಗಿತ್ವದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.

ಇದನ್ನೂ ಓದಿ | Mohammed Nalapad: ಯೂತ್‌ ಕಾಂಗ್ರೆಸ್‌ ಗಲಾಟೆ; ಶೃಂಗೇರಿ ಇಲಿಯಾಸ್‌ಗೆ ನಲಪಾಡ್‌ ಆವಾಜ್‌, ಆಡಿಯೊ ವೈರಲ್

ಮುಂಡಗೋಡದ ಅತ್ತಿವೇರಿ ಪಕ್ಷಿಧಾಮ ಕುರಿತು ಮಾಹಿತಿ ನೀಡಿದ ಮಂಚೀಕೇರಿಯ ಎಸಿಎಫ್‌ ಹಿಮವತಿ ಭಟ್ಟ, ಈ ಪಕ್ಷಿಧಾಮ ಮಾನವ ನಿರ್ಮಿತವಾದರೂ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತವೆ. ಪಕ್ಷಿಗಳಿಗೆ ಕೃತಕ ನಡುಗಡ್ಡೆಗಳನ್ನು ನಿರ್ಮಿಸಲಾಗಿದ್ದು, ದೇಶ-ವಿದೇಶಗಳಿಂದ ಸುಮಾರು ೩೫ ಜಾತಿಯ ಪಕ್ಷಿಗಳು ಇಲ್ಲಿ ವಂಶಾಭಿವೃದ್ಧಿಗಾಗಿ ಸುರಕ್ಷಿತ ಪ್ರದೇಶವೆಂದು ವಲಸೆ ಬರುತ್ತವೆ. ಸುಮಾರು ೨೦೦೦ ಜಾತಿಯ ಪಕ್ಷಿಗಳಿವೆ. ನಿಸರ್ಗದಲ್ಲಿಯ ವೈವಿಧ್ಯತೆಯಲ್ಲಿ ನಮ್ಮ ಹಾಗೂ ಪರಿಸರದ ಸಾಮರಸ್ಯವಿದ್ದರೆ ಹೇಗೆ ಪರಿಸರವನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳಲು ಸಾಧ್ಯ ಎಂಬ ಯೋಚನೆಯ ಭಾಗವಾಗಿ ಈ ಕಾರ್ಯಕ್ರಮವಾಗಿದ್ದು, ಈ ಬಗ್ಗೆ ಅರಿತುಕೊಂಡರೆ ನಿಸರ್ಗ ತಾಣಗಳನ್ನು ಕೇವಲ ಪ್ರವಾಸೋದ್ಯಮ ದೃಷ್ಟಿಕೋನದಿಂದ ನೋಡುವುದು ಬದಲಾಗುತ್ತದೆ ಎಂದರು.

ಎಸಿಎಫ್ ಆನಂದ ಸಬಗೇರಿ ಸಸ್ಯಪಾಲನಾ ಕ್ಷೇತ್ರದ ಕುರಿತು ಮಾಹಿತಿ ನೀಡಿ ಸ್ಥಳೀಯವಾಗಿರುವ ಉತ್ತಮ ತಳಿಯ ಬೀಜಗಳನ್ನು ಸಂಗ್ರಹಿಸಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಇಲ್ಲಿ ಸುಮಾರು ೩೦ ಜಾತಿಯ, ೧.೫ ಲಕ್ಷ ಸಸಿಗಳನ್ನು ಸಿದ್ಧಪಡಿಸಿ ಬೇರೆ ಬೇರೆ ಕಡೆಗಳಲ್ಲಿ ನೆಡಲಾಗುತ್ತದೆ ಎಂದರು. ‌

ಪರಿಸರ ತಜ್ಞ ಗೋಪಾಲಕೃಷ್ಣ ಹೆಗಡೆ, ಕಪ್ಪೆಗಳ ವಿವಿಧ ಪ್ರಭೇದ, ಹಾರ್ನಬಿಲ್ ಪಕ್ಷಿಗಳ ವಂಶಾಭಿವೃದ್ಧಿ, ಅವುಗಳ ಚಟುವಟಿಕೆ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದರು. ಮೊದಲ ದಿನ ಯಲ್ಲಾಫುರ ಅರಣ್ಯ ವ್ಯಾಪ್ತಿಯ ಸಸ್ಯೊದ್ಯಾನ, ಸಬಗೇರಿ ಸಸ್ಯಪಾಲನಾ ಕ್ಷೇತ್ರ, ಮುಂಡಗೋಡ ಅತ್ತಿವೇರಿ ಪಕ್ಷಿಧಾಮದಲ್ಲಿ ಬೋಟಿಂಗ್, ಪಕ್ಷಿಗಳ ಕುರಿತು ಸಾಕ್ಷ್ಯಚಿತ್ರ ವೀಕ್ಷಣೆ, ನಂತರ ಮಾಗೋಡ ವಿಶ್ರಾಂತಿ ಗೃಹದಲ್ಲಿ ಪರಿಸರ ರಕ್ಷಣೆಯಲ್ಲಿ ನನ್ನ ಪಾತ್ರ ಕುರಿತು ಸಂವಾದ ಕಾರ್ಯಕ್ರಮ ಹಾಗೂ ಅಲ್ಲಿಯೇ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಾದ ಎಲ್.ಎ. ಮಠದ, ಶಿಲ್ಪಾ ನಾಯ್ಕ, ಸುರೇಶ ಕಲ್ಲೋಳ್ಳಿ, ಡಿಆರ್‌ಎಫ್‌ಒಗಳಾದ ಸಂಜಯ ಕುಮಾರ, ಅಲ್ತಾಫ ಚೌಕ ಡಾಕ್, ಸಂಜೀವ ಎಸ್‌ಪಿ, ಅಶೋಕ ಹಳ್ಳಿ ಹಾಗೂ ಸಿಬ್ಬಂದಿ ವಿವಿಧ ಮಾಹಿತಿ ನೀಡಿದರು.

ಇದನ್ನೂ ಓದಿ | Hijab Row: ಹಿಜಾಬ್ ನಿಷೇಧ ಪ್ರಕರಣ ವಿಚಾರಣೆಗೆ ಶೀಘ್ರ ತ್ರಿಸದಸ್ಯ ಪೀಠ ರಚನೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್

ಭೂ ದೃಶ್ಯ ಯಾತ್ರೆ ಉತ್ತಮ ಮಾಹಿತಿಯನ್ನೊಳಗೊಂಡಿತ್ತು. ಹಾರ್ನಬಿಲ್ ಪಕ್ಷಿಗಳು ಸ್ವಚ್ಛತೆಗೆ ನೀಡುವ ಆದ್ಯತೆ ಕುರಿತು ಅರಿತ ನಮಗೆ, ಕಪ್ಪೆಯ ಕುರಿತು ಸೋಜಿಗವೆನಿಸಿತು. ನಮಗೆ ಇವುಗಳಿಂದ ಪಾಠ ಕಲಿಯುವುದು ತುಂಬಾ ಇದ್ದು, ಮೋಜು ಮಸ್ತಿಗಾಗಿ ಪ್ರಕೃತಿಯನ್ನು ನೋಡುವ ನಾವು, ಇದೀಗ ಆ ದೃಷ್ಟಿಕೋನವನ್ನೇ ಬದಲಾಯಿಸಿ ಪ್ರಕೃತಿ ವೈವಿಧ್ಯತೆ ಬಗ್ಗೆ ತಿಳಿದುಕೊಳ್ಳುವ ಅದನ್ನು ಉಳಿಸಿಕೊಳ್ಳುವ ಆಸಕ್ತಿ ಹೆಚ್ಚಿಸಿದೆ ಎಂದು ಸರ್ಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿನಿ ಪವಿತ್ರಾ ಮರಾಠಿ ಹೇಳಿದರು.

Exit mobile version