Site icon Vistara News

Yallapura News | ಶತಮಾನೋತ್ಸವದ ಸಂಭ್ರಮದಲ್ಲಿರುವ ಶಾಲೆಯ ಸೊಬಗು ಹೆಚ್ಚಿಸಿದ ಬೆಂಗಳೂರಿನ ಉಪಕೃತಿ ಎನ್‌ಜಿಒ

Nandolli Government Higher Primary School Bengaluru's Upakriti NGO

ಯಲ್ಲಾಪುರ: ಶತಮಾನೋತ್ಸವದ ಸಂಭ್ರಮದಲ್ಲಿರುವ (Yallapura News) ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂದ‌ ಹೆಚ್ಚಿದೆ. ಈ ಕೆಲಸಕ್ಕೆ ಬೆಂಗಳೂರಿನ ಉಪಕೃತಿ ಎನ್‌ಜಿಒ ಕೈಜೋಡಿಸಿದೆ. ಕಳೆದೆರಡು ದಿನಗಳಿಂದ ಶಾಲೆಯ ಗೋಡೆಗಳು, ಕಾಂಪೌಂಡ್‌ಗಳು ರಂಗುರಂಗಿನ ಚಿತ್ತಾರಗಳಿಂದ ಕಂಗೊಳಿಸಯತ್ತಿವೆ. ಈ ಮೂಲಕ ಶಾಲೆಯ ಸೊಬಗನ್ನು ಹೆಚ್ಚಿದೆ.

ಉಪಕೃತಿ ಎನ್‌ಜಿಒನ ಸ್ಥಾಪಕ ಚಂದನ್‌ ಎನ್‌. ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ, ಬುಡಕಟ್ಟು ಜನಾಂಗಗಳು ಇರುವಂತಹ ಸ್ಥಳಗಳಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿರುವ ಪಾಲಕರು, ಸರ್ಕಾರಿ ಶಾಲೆಗಳ ಕಡೆ ಗಮನಹರಿಸುತ್ತಿಲ್ಲ. ಖಾಸಗಿ ಶಾಲೆಗಳ ವೈಭವದ ಮುಂದೆ ಮಂಕಾಗುತ್ತಿರುವ, ವಿಶೇಷವಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕೈಲಾದಷ್ಟು ಮಟ್ಟಿಗೆ ಸುಂದರಗೊಳಿಸಿ ಆ ಮೂಲಕ ಕಲಿಕೆಗೆ ಸಹಕಾರವಾಗುವಂತಹ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವಂತಹ ಚಿತ್ರಗಳನ್ನು ಸಹ ಹೊರಗೋಡೆಯ ಮೇಲೆ ರಚಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿ ತಿಂಗಳು ಒಂದೊಂದು ಶಾಲೆಯನ್ನು ಆಯ್ಕೆ ಮಾಡುತ್ತೇವೆ. ಇದಕ್ಕೂ ಮೊದಲು ರಾಜ್ಯದ ವಿವಿಧ ಭಾಗಗಳ 10 ಶಾಲೆಗಳನ್ನು ಸುಂದರಗೊಳಿಸಲಾಗಿದೆ. ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಆಯಾ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳ ದಾಖಲಾತಿ ಪ್ರಮಾಣ, ಅವಶ್ಯಕತೆ, ಮಕ್ಕಳ ಅನಿಸಿಕೆಗಳನ್ನು ಸಂಗ್ರಹಿಸುತ್ತೇವೆ. ನಮ್ಮ ಈ ಕಾರ್ಯಕ್ಕೆ ಅನೇಕ ಸಂಘ ಸಂಸ್ಥೆಗಳು ಪ್ರಾಯೋಜಕತ್ವವನ್ನು ಸಹ ನೀಡುತ್ತಿವೆ. ಈ ಬಾರಿ ನಂದೊಳ್ಳಿ ಶಾಲೆಯು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಲ ಕಾರ್ಯಕ್ಕೆ ಸೂಕ್ತವಾದದ್ದು ಎಂದು ಇಲ್ಲಿಗೆ ಬಂದಿದ್ದೇವೆ ಎಂದರು.

ಇದನ್ನೂ ಓದಿ | Avatar 3 | ಅವತಾರ್-2 ಸಕ್ಸೆಸ್‌ ಬೆನ್ನಲ್ಲೇ ಅವತಾರ್‌-3 ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್ ಕ್ಯಾಮರೂನ್!

ಸ್ವಯಂ ಸೇವಕ ಸಂಜಯ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಲ್ಲಿರುವ ಉತ್ಸಾಹ ಸೃಜನಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡುತ್ತೇವೆ. ನಮ್ಮ ತಂಡದಲ್ಲಿ ವಿದ್ಯಾರ್ಥಿಗಳು, ಕಲಾಕಾರರು, ಎಂಜಿನಿಯರ್‌, ವಕೀಲರು, ಹೀಗೆ ವಿವಿಧ ಕ್ಷೇತ್ರದ ಸ್ವಯಂ ಸೇವಕರಿದ್ದು, ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ | Brazil Riots | ಬ್ರೆಜಿಲ್​ನಲ್ಲಿ ಭುಗಿಲೆದ್ದ ಪ್ರತಿಭಟನೆಯನ್ನು ಖಂಡಿಸಿದ ಪ್ರಧಾನಿ ಮೋದಿ; ಅಲ್ಲಿನ ಸರ್ಕಾರಕ್ಕೆ ಬೆಂಬಲ ಸೂಚಿಸಿ ಟ್ವೀಟ್​

ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಭಟ್ಟ, ದೂರದ ಊರಿನಿಂದ ಬಂದು ನಮ್ಮ ಶಾಲೆಯನ್ನು ಸುಂದರಗೊಳಿಸುವತ್ತ ನಿಸ್ವಾರ್ಥ ಸೇವೆ ಮಾಡುತ್ತಿರುವ ಉಪಕೃತಿ ಸಂಸ್ಥೆಗೆ ನಮ್ಮೆಲ್ಲ ಊರ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸುಂದರ ವಾತಾವರಣ ಮಕ್ಕಳ ಕಲಿಕೆಗೆ ಇನ್ನಷ್ಟು ಪೂರಕವಾಗಲಿದ್ದು, ಅಂತೆಯೇ ನಮ್ಮ ಶಾಲೆಯು ಎಲ್ಲ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಲಿದೆ ಎಂದರು.

ಬೆಂಗಳೂರಿನಿಂದ ಆಗಮಿಸಿರುವ 24 ಜನರ ತಂಡವು, ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಶಾಲಾ ಗೋಡೆಗಳ ಮೇಲೆ ಕಲಿಕೆಗೆ ಸಂಬಂಧಪಟ್ಟ, ಸೃಜನಾತ್ಮಕತೆಗೆ ಸಂಬಂಧಿಸಿದ ಹಾಗೂ ಅರಿವನ್ನು ಮೂಡಿಸುವ ವಿಶೇಷ ಕಲಾಕೃತಿಗಳನ್ನು ರಚಿಸಿದೆ. ಇವರ ಕಾರ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ್‌ ನಾಯ್ಕ, ಎಸ್‌.ಡಿ.ಎಮ್.ಸಿ. ಸದಸ್ಯರು, ಪಾಲಕರು, ಊರ ನಾಗರಿಕರು, ಗ್ರಾಮ ಪಂಚಾಯಿತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗಿದೆ.

ಇದನ್ನೂ ಓದಿ | Viral Video | ಅಯೋಧ್ಯಾ ಜೈಲಿಂದ ಬಿಡುಗಡೆಯಾದ 98ರ ವೃದ್ಧನಿಗೆ, ಸನ್ಮಾನಿಸಿ ಬೀಳ್ಕೊಟ್ಟ ಪೊಲೀಸ್​

Exit mobile version