Site icon Vistara News

Yallapura News: ವಿದ್ಯಾರ್ಥಿಗಳಿಗೆ ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು: ಸಚಿವ ಶಿವರಾಮ ಹೆಬ್ಬಾರ್

Minister Shivaram Hebbar yallapura

ಯಲ್ಲಾಪುರ: ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಕೇವಲ ತಾಲೂಕಿಗೆ ಅಷ್ಟೇ ಸೀಮಿತವಾಗಿರಿಸದೆ ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು. ಜಾಗತಿಕವಾಗಿ ಪೈಪೋಟಿ ನೀಡಲು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಾಮಾನ್ಯ ಜ್ಞಾನ, ಆಂಗ್ಲ ಭಾಷೆ ಮತ್ತು ಕಂಪ್ಯೂಟರ್ ಶಿಕ್ಷಣಗಳ ಪರಿಣತಿಯನ್ನು ಹೊಂದಿರಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರದಲ್ಲಿ ಸಾಂಸ್ಕೃತಿಕ, ಕ್ರೀಡೆ, ಯುವ ರೆಡ್ ಕ್ರಾಸ್‌ ಮತ್ತು ಸ್ಕೌಟ್ಸ್‌, ಗೈಡ್ ಚಟುವಟಿಕೆ ಕಾರ್ಯಕ್ರಮವನ್ನು ಮಂಗಳವಾರ (ಜ.೨೪) ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸೈನಿಕ, ಕೃಷಿಕ, ಕಾರ್ಮಿಕನ ಸೇವೆ ಬಹಳ ಮಹತ್ವದ್ದಾಗಿದೆ. ಅವರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಆದ್ಯತೆಯಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕೃಷಿಯ ಜ್ಞಾನ ಹೊಂದಬೇಕು. ಅನ್ನ ತಿನ್ನದೇ ಚಿನ್ನ ಗಳಿಸಲು ಸಾಧ್ಯವಿಲ್ಲ. ಅಕ್ಕಿ ಎಲ್ಲಿ ಬೆಳೆಯುತ್ತದೆ? ನೆಲದಲ್ಲೋ ಮರದಲ್ಲೋ ಎಂಬದನ್ನೂ ತಿಳಿಯದಂತಹ ಪ್ರಸಂಗವನ್ನು ತಂದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಈ ವರ್ಷ ನನಗೂ ಪರೀಕ್ಷೆಯ ಕಾಲ ಎಂದು ಚುನಾವಣೆಯು ಸನ್ನಿಹಿತವಾಗುತ್ತಿರುವುದನ್ನು ಸೂಚ್ಯವಾಗಿ ತಿಳಿಸಿ ಕಾಲೇಜಿನ ವಿದ್ಯಾರ್ಥಿಗಳಾದ ನೀವು ಈಗ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಭವಿಷ್ಯವನ್ನು ನಿರ್ಣಯಿಸುವ ಮತ ನೀಡುವ ಜವಾಬ್ದಾರಿಯನ್ನು ಹೊಂದಿದ್ದೀರಿ. ಚುನಾಯಿತ ಪ್ರತಿನಿಧಿಗಳ ಆಯ್ಕೆ, ರಾಜಕೀಯ ವಿದ್ಯಮಾನ ಕುರಿತು ಪತ್ರಿಕೆ, ದೂರದರ್ಶನ ನೋಡುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಇದನ್ನೂ ಓದಿ | Republic Day 2023: ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜತೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ

ಶಿಕ್ಷಣ ಪ್ರೇಮಿ ಡಿ. ಶಂಕರ ಭಟ್ಟ ಮಾತನಾಡಿ, ದೈಹಿಕವಾಗಿ ಶಕ್ತಿವಂತನಾದವನು ಮಾನಸಿಕವಾಗಿ ಕುಸಿಯಲಾರ. ಏಕಾಗ್ರತೆಯಿಂದ ಓದುವ ಶಕ್ತಿ ಪಡೆಯಿರಿ. ಎನ್‌ಎಸ್‌ಎಸ್‌ನಂತಹ ಸೇವೆಯಿಂದ ಸವಾಲುಗಳನ್ನು ಎದುರಿಸುವ ಜೀವನ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ ಎಂದರು.

ಇದನ್ನೂ ಓದಿ | Kannada New Movie: ಸಿಂಪಲ್ ಸುನಿ-ವಿನಯ್ ರಾಜ್‌ಕುಮಾರ್‌ ಕಾಂಬಿನೇಶನ್‌ ಚಿತ್ರಕ್ಕೆ ಧಾರವಾಡದ ಸ್ವತಿಷ್ಠ ಕೃಷ್ಣನ್ ನಾಯಕಿ

ಪ್ರಾಂಶುಪಾಲ ಡಿ. ಎಸ್. ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶಿರೀಷ್ ಪ್ರಭು, ಪ್ರೇಮಾನಂದ ನಾಯ್ಕ ಹಾಗೂ ದೇವಿದಾಸ ಶಾನಭಾಗ ಉಪಸ್ಥಿತರಿದ್ದರು. ಐಕ್ಯೂಎಸಿ, ಸೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಡಿ.ಜಿ. ತಾಪಸ್, ಕಾರ್ಯಕ್ರಮ ಯೋಜನಾಧಿಕಾರಿ ರಾಮಕೃಷ್ಣ ಗೌಡ ವರದಿ ವಾಚಿಸಿದರು. ಉಪನ್ಯಾಸಕರಾದ ಶರತಕುಮಾರ್ ಸ್ವಾಗತಿಸಿದರು. ಸುರೇಖಾ ತಡವಲ್ ನಿರೂಪಿಸಿದರು. ಜನಾರ್ದನ ರೆಡ್ಡಿ ವಂದಿಸಿದರು. ಇದೇ ಸಂದರ್ಭದಲ್ಲಿ ವಚನ ಕಮ್ಮಟ, ರಾಷ್ಟ್ರೀಯ ಯುವ ಸಪ್ತಾಹ ಹಾಗೂ ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

Exit mobile version