Site icon Vistara News

Yellapur News | ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಸಚಿವ ಶ್ರೀರಾಮುಲುಗೆ ಸಮಸ್ಯೆ ಬಗೆಹರಿಸಲು ಮನವಿ

MInister Sriramulu village stay yellapur

ಯಲ್ಲಾಪುರ: ಗ್ರಾಮ ವಾಸ್ತವ್ಯಕ್ಕೆಂದು ತಾಲೂಕಿಗೆ (Yellapur News) ಆಗಮಿಸಿದ್ದ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ಅವರನ್ನು ಪಟ್ಟಣದ ಐಬಿ ಬಳಿ ಪರಿಶಿಷ್ಟ ಸಮುದಾಯದ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಈ ವೇಳೆ ಸಚಿವರು ಹಲವು ವಿಷಯಗಳ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಹಲವು ವರ್ಷಗಳ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಸೂಚನೆಯನ್ನೂ ನೀಡಿದರು.

ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿದ ಸಚಿವ ಶ್ರೀರಾಮುಲು, ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ, ಎಲ್ಲವನ್ನೂ ಬಗೆಹರಿಸುವ ಭರವಸೆ ನೀಡಿದರು. ಇದೇ ವೇಳೆ ಸ್ಥಳದಲ್ಲಿದ್ದ ತಹಸೀಲ್ದಾರ್‌ ಅವರನ್ನು ಕರೆದು, ಹಲವು ವರ್ಷಗಳಿಂದ ಒಂದೆಡೆ ವಾಸವಾಗಿರುವ ನಾಗರಿಕರಿಗೆ ಈವರೆಗೂ ವಿದ್ಯುತ್‌ ಸಂಪರ್ಕ ಇಲ್ಲವೆಂದರೆ ಅದು ಸರ್ಕಾರಕ್ಕೆ ಮುಜುಗರ ತರುವ ವಿಷಯವಾಗಿದೆ. ಅತಿಕ್ರಮಣದಾರರಾಗಿದ್ದರೂ, ಹಲವು ವರ್ಷಗಳಿಂದ ವಾಸಿಸುತ್ತಿರುವುದರಿಂದ, ಆ ಜಾಗವನ್ನು ಮಂಜೂರು ಮಾಡಿ, ವಿದ್ಯುತ್‌ ಸಂಪರ್ಕ ನೀಡಬೇಕು. ಆ ಮೊತ್ತವನ್ನು ತಮ್ಮ ಇಲಾಖೆಯಿಂದ ಭರಿಸಲಾಗುವುದು ಎಂದು ಸೂಚನೆ ನೀಡಿದರು.

ಜನರಿಂದ ಮನವಿ ಸ್ವೀಕರಿಸುತ್ತಿರುವ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು.


ಬುಡಕಟ್ಟು ಜನಾಂಗದ ಪರವಾಗಿ ವಕೀಲ ಜಯರಾಮ ಸಿದ್ದಿ ಮನವಿ ನೀಡಿ, ಅರಣ್ಯದಲ್ಲಿ ವಾಸಿಸುತ್ತಿರುವ ಸಮುದಾಯದವರಿಗೆ ಹಕ್ಕು ಪತ್ರವನ್ನು ನೀಡಲಾಗಿದ್ದರೂ, ಹಲವು ನ್ಯೂನತೆಗಳನ್ನು ಒಳಗೊಂಡಿದೆ. ಅವುಗಳನ್ನು ಸರಿಪಡಿಸಬೇಕು. ಸುಶಿಕ್ಷಿತರಾಗಿದ್ದರೂ, ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಮನೆ ನಿರ್ಮಾಣಕ್ಕೆ ಪೂರಕ ಹಣ ನೀಡಲಾಗುತ್ತಿಲ್ಲ. ಕುಡಿಯುವ ನೀರಿನ ಪೂರೈಕೆಗೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಈ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಡಬೇಕಾಗಿ ವಿನಂತಿಸಿದರು.

ಕರಾವಳಿ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರದವರು ಸಹ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದು ಸರ್ಕಾರದ ಸವಲತ್ತುಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಈಗ ಜಿಲ್ಲಾಡಳಿತವು ಇದಕ್ಕೆ ತಡೆ ನೀಡಿದೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕೆಲವರು ಸಚಿವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌, ತಹಸೀಲ್ದಾರ್‌ ಶ್ರೀಕೃಷ್ಣ ಕಾಮ್ಕರ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಇದ್ದರು.

ಇದನ್ನೂ ಓದಿ | Sabarimala News | ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ಸೋಗಲ್ಲಿ 2000 ರೂ. ವಂತಿಗೆ ಸಂಗ್ರಹ; ಗ್ರಾಮಸ್ಥರಿಂದ ತರಾಟೆ

Exit mobile version