ಯಲ್ಲಾಪುರ: ಬಾವಿಗೆ ಇಳಿದ ಮೂವರು ದುರಂತ ಸಾವು ಕಂಡ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಮಾವಿನಕಟ್ಟಾದಲ್ಲಿ (Yallapur news) ನಡೆದಿದೆ. ಪಂಪ್ ರಿಪೇರಿಗೆಂದು ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿದರೆ, ಅವರ ರಕ್ಷಣೆಗೆಂದು ಬಾವಿಗೆ ಇಳಿದ ಇತರ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಶಿರಸಿಯ ದೇವನಿಲಯದ ನಿವಾಸಿ ಗೋವಿಂದ ಸೋಮಯ್ಯ ಪೂಜಾರಿ (60), ಗಣೇಶ ರಾಮದಾಸ್ ಶೇಟ್ (23), ಸುರೇಶ ನಾಯರ್ (40) ಮೃತ ದುರ್ದೈವಿಗಳಾಗಿದ್ದಾರೆ.
ಗೋವಿಂದ ಸೋಮಯ್ಯ ಪೂಜಾರಿ, 10 ಅಡಿ ನೀರಿರುವ ಬಾವಿಯಲ್ಲಿ ಪಂಪ್ ಸೆಟ್ ಸರಿ ಮಾಡಲು ಇಳಿದಿದ್ದರು. ಈ ವೇಳೆ ಬಾವಿಯಲ್ಲಿ ಆಮ್ಲಜನಕ ಕೊರತೆಯಿಂದ ಉಸಿರುಗಟ್ಟುವ ಸ್ಥಿತಿ ಕಾಣಿಸಿಕೊಂಡಿತ್ತು. ಕೆಳಗೆ ಇಳಿದವರು ಮೇಲೆ ಬರದ ಕಾರಣಕ್ಕೆ ಅದೇ ದಾರಿಯಲ್ಲಿ ಹೋಗುತ್ತಿದ್ದ ಗಣೇಶ್ ಶೇಟ್‌ನನ್ನು ಕುಟುಂಬಸ್ಥರು ಕರೆದಿದ್ದರು. ಗೋವಿಂದ ಅವರನ್ನು ಕಾಪಾಡಲು ಕೂಡಲೇ ಗಣೇಶ್ ಬಾವಿಗೆ ಇಳಿದಿದ್ದರು. ಆದರೆ ಗಣೇಶ್ ಕೂಡ ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿದ್ದ ಕಾರಣಕ್ಕೆ ಸಹಾಯಕ್ಕಾಗಿ ಸುರೇಶ್ ಧಾವಿಸಿದ್ದಾರೆ.
ಇದನ್ನೂ ಓದಿ: Weather Report: ಮುಂದಿನ 24 ಗಂಟೆಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ; ಈ ಜಿಲ್ಲೆಗಳಿಗೆ ಅಲರ್ಟ್
ಇಬ್ಬರನ್ನು ರಕ್ಷಣೆ ಮಾಡಲು ಸುರೇಶ್ ಬಾವಿಗೆ ಹಾರಿದ್ದಾರೆ. ಆದರೆ ಕೊಳಚೆಯಿಂದ ಕೂಡಿದ ಬಾವಿಯಲ್ಲಿ ಆಕ್ಸಿಜನ್ ಕೊರತೆಯಿಂದ ಮೂವರು ಕೂಡ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ತನಿಖೆ ನಂತರ ಸತ್ಯಾಸತ್ಯೆತೆ ತಿಳಿಬೇಕಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.