ಬೆಂಗಳೂರು: ಯಶವಂತಪುರ ಎಪಿಎಂಸಿ ಯಾರ್ಡ್‌ಗೆ (APMC) ಬರುವ ಸಾವಿರಾರು ಲಾರಿಗಳಿಂದ ಟ್ರಾಫಿಕ್ ಸಮಸ್ಯೆಯನ್ನು (Yeshwanthpur Apmc Yard) ತಂದೊಡ್ಡುತ್ತಿದ್ದು, ಹೀಗಾಗಿ ಯಶವಂತಪುರದಿಂದ ದಾಸನಪುರಕ್ಕೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಯಶವಂತಪುರ ಎಪಿಎಂಸಿಗೆ ನಿತ್ಯ 500ಕ್ಕೂ ಹೆಚ್ಚು ಲಾರಿಗಳು ಸಾಲುಸಾಲಾಗಿ ನಿಲ್ಲುವುದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಕ್ಕಪಕ್ಕದ ಶಾಲೆಗಳು, ಆಸ್ಪತ್ರೆಗಳು, ಕಾರ್ಖಾನೆಗಳು ದೂರಿವೆ. ಗೊರಗುಂಟೆಪಾಳ್ಯ, ಯಶವಂತಪುರ, ಇಸ್ಕಾನ್ ಜಂಕ್ಷನ್, ಮಹಾಲಕ್ಷ್ಮಿ ಲೇಔಟ್ ಹಾಗೂ ಮಲ್ಲೇಶ್ವರಂ, ಹೆಬ್ಬಾಳದ ಕಡೆಗೆ ಲಾರಿಗಳು ಪ್ರವೇಶಿಸುವ ವೇಳೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಈರುಳ್ಳಿ, ಆಲೂಗಡ್ಡೆ, ಶುಂಠಿ ಪದಾರ್ಥಗಳು ಯಶವಂತಪುರದಿಂದ ಅತೀ ಹೆಚ್ಚಾಗಿ ತಮಿಳುನಾಡಿಗೆ ಸರಬರಾಜು ಆಗುತ್ತಿದೆ. ಈ ವೇಳೆ ಕೋರಮಂಗಲ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಕಡೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಯಶವಂತಪುರದಿಂದ 10 ಕಿ.ಲೋ ಮೀಟರ್ ದೂರದಲ್ಲಿರುವ ದಾಸನಪುರಕ್ಕೆ ಮಾರ್ಕೆಟ್ ಶಿಫ್ಟ್ ಸೂಚನೆ ನೀಡಲಾಗಿದೆ.
ಸದ್ಯ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೌಖಿಕವಾಗಿ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ದಾಸನಪುರದಿಂದ ನೈಸ್ ರಸ್ತೆ ಮೂಲಕ ತಮಿಳುನಾಡು ತಲುಪಲು ಪ್ಲ್ಯಾನ್ ಮಾಡಲಾಗಿದೆ. ಇದರಿಂದ ಲಾರಿಗಳು ನಗರಕ್ಕೆ ಎಂಟ್ರಿಯಾಗಂತೆ ರಿಂಗ್ ರಸ್ತೆ ಮೂಲಕ ತಲುಪಲು ಅನುಕೂಲ ಆಗುತ್ತದೆ. ಕೂಡಲೇ ಸ್ಥಳಾಂತರಕ್ಕೆ ಮತ್ತೊಮ್ಮೆ ಸೂಚನೆ ನೀಡಲಾಗುವುದು ಎಂದು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಾಂತರಕ್ಕೆ ವರ್ತಕರ ಆಕ್ರೋಶ
ಎಪಿಎಂಸಿ ಸ್ಥಳಾಂತರ ವಿಚಾರವು ವರ್ತಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ದಾಸನಪುರಕ್ಕೆ ಶಿಫ್ಟ್ ಆದರೆ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ರೈತರಿಗೆ ತೊಂದರೆ ಆಗುತ್ತದೆ. ಹೀಗಾಗಿ ಸ್ಥಳಾಂತರಕ್ಕೆ ವಿರುದ್ಧವಾಗಿ 300ಕ್ಕೂ ಅಧಿಕ ಆಕ್ಷೇಪಣೆಗಳು ಬಂದಿವೆ. ಸರ್ಕಾರದ ನಡೆ ಖಂಡಿಸಿ ಕೋರ್ಟ್ ಮೊರೆ ಹೋಗಿದ್ದೇವೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ವರ್ತಕರ ಸಂಘ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; 13 ವರ್ಷದ ಬಾಲಕ ಸಾವು
ಸಿಟಿಯಲ್ಲಿ ಹೆಚ್ಚಾಗುತ್ತಿರುವ ಸಂಚಾರ ದಟ್ಟನೆಗೆ ಬ್ರೇಕ್ ಹಾಕಲು ಸರ್ಕಾರ ಮಾರುಕಟ್ಟೆ ಸ್ಥಳಾಂತರಕ್ಕೆ ಮುಂದಾಗಿದೆ. ಆದರೆ, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ