Site icon Vistara News

Yoga Camp: ಜು.12ರಿಂದ ರಾಜ್ಯ, ರಾಷ್ಟ್ರೀಯ, ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ ಯೋಗ ಜೀವನ ದರ್ಶನ-2023

Sri Patanjali Yoga Shikshana Samiti

ಬೆಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಜುಲೈ 12ರಿಂದ 16ರವರೆಗೆ ನಗರದ ರಾಜರಾಜೇಶ್ವರಿ ನಗರದ ತಿರುಚ್ಚಿ ಮಹಾಸ್ವಾಮಿಗಳ ರಸ್ತೆಯ ಮೀನಾಕ್ಷಿ ಕಲ್ಯಾಣ ಮಂಟಪದಲ್ಲಿ ʼರಾಜ್ಯ, ರಾಷ್ಟ್ರೀಯ ಮತ್ತು ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ ಯೋಗ ಜೀವನ ದರ್ಶನ-2023ʼ (Yoga Camp) ಹಮ್ಮಿಕೊಳ್ಳಲಾಗಿದೆ.

ಜುಲೈ 12ರಂದು ಸಂಜೆ 6 ಗಂಟೆಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ಅಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯ, ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಭಾಗವಹಿಸಲಿದ್ದಾರೆ. ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಹರೀಶ್‌ ಕೋಟ್ಯಾನ್‌ ಅಣ್ಣ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

5 ದಿನಗಳ ಕಾಲ ವಿವಿಧ ಕಾರ್ಯಕ್ರಮ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ʼರಾಜ್ಯ, ರಾಷ್ಟ್ರೀಯ ಮತ್ತು ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ ಯೋಗ ಜೀವನ ದರ್ಶನ-2023ʼ ಜುಲೈ 12 ರಿಂದ 16ರವರೆಗೆ ರಾಜರಾಜೇಶ್ವರಿ ನಗರದ ಮೀನಾಕ್ಷಿ ಹಾಗೂ ಪದ್ಮಾವತಿ ಅವಳಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಇದನ್ನೂ ಓದಿ | Surya Namaskar: 5,200 ಮೀ. ಎತ್ತರ ಪರ್ವತದ ಮೇಲೆ 108 ಸೂರ್ಯ ನಮಸ್ಕಾರ! ವಿಶಿಷ್ಟ ಸಾಧನೆ ಮಾಡಿದ ಯುವಕ

5 ದಿನಗಳ ಕಾಲದ ವಸತಿ ಸಹಿತ ಯೋಗ ತರಬೇತಿ ಶಿಬಿರದಲ್ಲಿ ಮಾತೆಯರು, ಹಿರಿಯ ನಾಗರಿಕರು, ಯುವಕರು, ಯುವತಿಯರು, ವೃತ್ತಿಪರರು ಹಾಗೂ ಸಾಮಾನ್ಯ ವಿಭಾಗದ ಯೋಗ ಶಿಕ್ಷಕರಿಗಾಗಿ ಸಮಿತಿಯ ನುರಿತ ಹಾಗೂ ಅನುಭವಿ ಯೋಗ ಶಿಕ್ಷಕರಿಂದ ತರಬೇತಿ ಶಿಬಿರ ನಡೆಯಲಿದೆ.

“ವಸುದೈವ ಕುಟುಂಬಕಮ್” ಎಂಬ ಧ್ಯೇಯ ಹಾಗೂ ಸಂಸ್ಕಾರ – ಸಂಘಟನೆ – ಸೇವೆ ಎಂಬ ಮೌಲ್ಯಗಳೊಂದಿಗೆ ನಡೆಯಲಿರುವ 46ನೇ ಪ್ರಾಂತ ಪ್ರಶಿಕ್ಷಣ ಶಿಬಿರದಲ್ಲಿ “ವ್ಯವಸ್ಥೆಯೇ ಶಿಕ್ಷಣ” ಹಾಗೂ “ಕ್ಷಣ ಕ್ಷಣ ಶಿಕ್ಷಣ” ಎಂಬ ಪರಿಕಲ್ಪನೆಯಲ್ಲಿ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ವ್ಯವಹಾರಿಕವಾಗಿ, ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಪಂಚಮುಖಿ ಶಿಕ್ಷಣ ದೊರೆಯಲಿದೆ.

ಸಹಚಿಂತನಾ, ಸಹಭೋಜನ, ಸಹಜೀವನ, ಸ್ವ ಅನುಭವದ ಮೂಲಕ ಸರ್ವೇಶ್ವರನ ದರ್ಶನದ ಸಾಕ್ಷಾತ್ಕಾರ ಹಾಗೂ ಸಾಮೂಹಿಕ ಅಗ್ನಿಹೋತ್ರ, ಮಂತ್ರ ಸಹಿತ ಭೋಜನ ಮಾಡುವ ಶಾಸ್ತ್ರೀಯ ಕ್ರಮ, ಯೋಗ ನಿದ್ರಾ ಕ್ರಮವನ್ನು ಗುರುಕುಲ ಶಿಕ್ಷಣ ರೂಪದಲ್ಲಿ ಶಿಬಿರಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತದೆ.

ಶಿಬಿರದಲ್ಲಿ ಪ್ರತಿ ದಿನ ಬೆಳಗ್ಗೆ 4 ಗಂಟೆಯಿಂದ ರಾತ್ರಿ 10ಗಂಟೆವರೆಗೆ ಕ್ಷಣ ಕ್ಷಣ ಶಿಕ್ಷಣದ ಮೂಲಕ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಭೂತಶುದ್ಧಿ ಕ್ರಿಯೆಗಳು, ಬೌದ್ಧಿಕ ಅವಧಿಗಳು, ದೇಶೀಯ ಪದ್ಧತಿಯ ಆಟಗಳು, ಸ್ಥೂಲದಿಂದ ಸೂಕ್ಷ್ಮದೆಡೆಗೆ ಕೊಂಡೊಯ್ಯುವ ಶಿಕ್ಷಣವನ್ನು ಅನುಭವಕ್ಕೆ ತರಿಸಲಾಗುತ್ತದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಜನರ ಪ್ರೀತಿಗಾಗಿ ಏಳು ಗುಡ್ಡ ಅಗೆದು ರಸ್ತೆ ಮಾಡಿದ ಭಾಪ್ಕರ್ ಮೇಷ್ಟ್ರು

ಯೋಗ ಜೀವನ ದರ್ಶನದ ಮೂಲಕ ಸನಾತನ ಜೀವನ ಜಾಗರಣೆ ಹಾಗೂ ಸನಾತನ ಜೀವನ ಜಾಗೃತಿಯ ಮೂಲಕ ಸಮಾಜವನ್ನು ಪುಷ್ಟೀಕರಿಸುವ ಉದ್ದೇಶದಿಂದ 43 ವರ್ಷಗಳ ಹಿಂದೆ 1980ರಲ್ಲಿ ಮಲ್ಲಾಡಿ ಹಳ್ಳಿಯ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ, ಅಜಿತ್ ಕುಮಾರ್ ಅಣ್ಣ ಅವರ ಮಾರ್ಗದರ್ಶನ ಹಾಗೂ ವಿಶ್ವ ವಿಖ್ಯಾತ ಯೋಗಪಟು ಪದ್ಮವಿಭೂಷಣ ಬಿ.ಕೆ.ಎಸ್. ಅಯ್ಯಂಗಾರ್ ಅವರ ಸಾಧನಾ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ, ಆಚಾರ್ಯ ಎ. ಆರ್. ರಾಮಸ್ವಾಮಿ ಅಣ್ಣ ಅವರಿಂದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆರಂಭಗೊಂಡಿತು. ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿದ್ದು, ಲಕ್ಷಾಂತರ ಯೋಗ ಬಂಧುಗಳ ದೊಡ್ಡ ಪರಿವಾರವಾಗಿ ಬೆಳೆಯುತ್ತಿದೆ.

Exit mobile version