ವಿಜಯಪುರ : ನಗರದ ಗೋಳಗುಮ್ಮಟ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ( Yoga Day 2022) ಹಿಜಾಬ್ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಯೋಗ ಮಾಡಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಗೋಳಗುಮಟ್ಟದ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಇದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಯೋಗ ಮಾಡುವುದರೊಂದಿಗೆ ಯೋಗದ ಮಹತ್ವ ಹಾಗೂ ಅಗತ್ಯತೆಯನ್ನು ಸಾರಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ: ಖೂಬಾ
ಗೋಳಗುಮ್ಮಟ ಆವರಣದಲ್ಲಿ ಯೋಗ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಪ್ರತಿನಿತ್ಯ ನಾವು ಯೋಗ ಮಾಡುತ್ತಾ ಇನ್ನಿತರರಿಗೂ ಪ್ರೇರಣೆ ನೀಡಬೇಕು. ಜಾತಿ ಮತ ಧರ್ಮ ಮೀರಿದ ಶಕ್ತಿ ಯೋಗದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಯೋಗವನ್ನು ಜೂನ್ 21ರಂದು ವಿಶ್ವದ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತಿಯರಿಗೆ ಹೆಮ್ಮೆಯ ಸಂಗತಿ ಎಂದರು.
ನಾವೆಲ್ಲರೂ ಯೋಗ ಮಾಡುವ ಸಂಕಲ್ಪ ಹೊಂದೋಣ. ಯೋಗ ಮಾಡಲು ಇತರರಿಗೆ ಪ್ರೇರೇಪಿಸೋಣ. ಇಡೀ ಸಮಾಜವನ್ನು ಒಂದೇ ಸೂತ್ರದಡಿ ತರುವ ಪ್ರಯತ್ನದಡಿ ಯೋಗ ದಿನಾಚರಣೆಗೆ ವಿಶೇಷ ಆದ್ಯತೆ ನೀಡಿದ್ದು, ಹಲವು ಧರ್ಮಿಯರು ಹಲವು ಭಾಷಿಕರನ್ನು ಒಳಗೊಂಡ ಭಾರತ ದೇಶದಲ್ಲಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಯೋಗದಲ್ಲಿ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ | Yoga Day 2022 | ಮೈಸೂರು ಡಿಜಿಟಲ್ ಯೋಗ ವಸ್ತು ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ್ ಕತ್ತಿ ಮಾತನಾಡಿ, ಯೋಗವು ವಿಶ್ವಕ್ಕೆ ಭಾರತದ ದೇಶದ ಕೊಡುಗೆಯಾಗಿದೆ. ವರ್ಷವಿಡೀ ಯೊಗ ಮಾಡಿದರೆ ಆರೋಗ್ಯಕ್ಕೆ ಸಹಕಾರಿ ಎಂಬುದನ್ಮು ತೋರಿಸಿ ಕೊಟ್ಟ ದೇಶ ನಮ್ಮದಾಗಿದೆ. ಇಡೀ ವಿಶ್ವದ ಗಮನ ಈ ದಿನ ಮೈಸೂರಿನತ್ತ ಇದೆ. ವಿಜಯಪುರದ ಕೀರ್ತಿಯನ್ನು ಇಡೀ ವಿಶ್ವಕ್ಕೆ ಸಾರಿದ ಗೋಲಗುಂಬಜ್ ಆವರಣದಲ್ಲಿ ಯೋಗ ದಿನ ಸಂಘಟಿಸಿ ಜಿಲ್ಲೆಯ ಸರ್ವ ಸಮುದಾಯದ ಜನರನ್ನು ಒಂದೆಡೆ ಸೇರಿಸಿದ ಪ್ರಯತ್ನ ಅಭಿನಂದನಾರ್ಹ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಯೋಗಕ್ಕೆ ತನ್ನದೇ ಆದ ಐತಿಹ್ಯವಿದೆ. ಪ್ರಾಚೀನ ಕಾಲದಿಂದಲೂ ಯೋಗ ಮನೆಮಾತಾಗಿದೆ. ಜನಹಿತ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಗಕ್ಕೆ ವಿಶೇಷ ಆದ್ಯತೆ ನೀಡಿವೆ. ದೇಶದ 75 ಐತಿಹಾಸಿಕ ತಾಣಗಳ ಪೈಕಿ ನಮ್ಮ ವಿಜಯಪುರ ಕೂಡ ಒಂದಾಗಿದ್ದು, ಐತಿಹಾಸಿಕ ತಾಣದಲ್ಲಿ ನಾವಿಂದು ಯೋಗ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಎಸ್.ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಶೋಕ್ ಅಲ್ಲಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಹಾಗೂ ಸಾವಿರಾರು ಯೋಗಪಟುಗಳಿದ್ದರು.
ಇದನ್ನೂ ಓದಿ | Yoga Day 2022 | 75-75-75 ಯೋಗ ಸಂಭ್ರಮ, ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಮರ್ಪಣೆ