Site icon Vistara News

ಅರವಿಂದರ ವಿಚಾರಧಾರೆಯನ್ನು ನಾವೆಲ್ಲ ಪಾಲಿಸಬೇಕಿದೆ: ಕಾ ಶ್ರೀ ನಾಗರಾಜ

ಯೋಗಿ ಅರವಿಂದ

ಬೆಂಗಳೂರು: ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬರೆಯುವುದಕ್ಕೆ ಹತ್ತಾರು ವರ್ಷಗಳ ಹಿನ್ನೆಲೆಯಿದೆ. ನಾನು ಹತ್ತು ವರ್ಷಗಳ ಹಿಂದೆ “ಭಾರತದ ಮರು ಹುಟ್ಟುʼ ಎಂಬ ಪುಸ್ತಕ ಓದಿದೆ. ಆ ಪುಸ್ತಕದಿಂದ ತಿಳಿವಳಿಕೆ ಸ್ವಲ್ಪ ಜಾಸ್ತಿ ಆಯ್ತು. ಅರವಿಂದರ ವಿಚಾರಧಾರೆಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಅದಕ್ಕಾಗಿ ಈ ಪುಸ್ತಕ ಬರೆದಿರುವೆ ಎಂದು ಲೇಖಕ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಕಾ. ಶ್ರೀ. ನಾಗರಾಜ ಹೇಳಿದರು.

ಕಾ. ಶ್ರೀ. ನಾಗರಾಜ ಅವರು ಬರೆದಿರುವ “ಮಂತ್ರದ್ರಷ್ಟ ಅರವಿಂದ ಘೋಷ್ʼ ಪುಸ್ತಕವನ್ನು ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಶನಿವಾರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಾ. ಶ್ರೀ ನಾಗರಾಜ ಅವರು ಮಾತನಾಡಿ “ಅರವಿಂದರ ಸಾಹಿತ್ಯ ತುಂಬ ವಿಶಾಲವಾದುದು. ಮಹಾಭಾರತವನ್ನು ವ್ಯಾಸ ಮಹರ್ಷಿ ಹೇಗೆ ವಿಸ್ತಾರವಾಗಿ ಬರೆದಿದ್ದಾರೋ ಹಾಗೆಯೇ ಅರವಿಂದರ ಬರವಣಿಗೆಗಳಿವೆ. ಅರವಿಂದರು ದೊಡ್ಡ ನಾಯಕರೂ ಆಗಿದ್ದರು. ಇಂಗ್ಲೆಂಡ್‌ನಿಂದ ಬಂದ ನಂತರ ಬಂಕಿಮಚಂದ್ರ ಚಟರ್ಜಿ ಅವರ ರಚನೆಯ ವಂದೇ ಮಾತರಂ ಗೀತೆ ಅವರಿಗೆ ಪ್ರೇರಣೆ ನೀಡಿತುʼʼ ಎಂದರು.

ವೇದ, ಉನಿಷತ್‌ಗೆ ಹೊಸ ವ್ಯಾಖ್ಯಾನ

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ “ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇಂಗ್ಲಿಷ್ ಪ್ರೇರಣೆಗೆ ಒಳಗಾದ ಅನೇಕರು ಹಲವು ಗಂಡಾಂತರ ಮಾಡಿದ್ದಾರೆ. ಆದರೆ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ಪಡೆದ ಅರವಿಂದರು ಸಾಹಿತ್ಯದಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಭಾರತದ ಭವಿಷ್ಯವನ್ನು ಮರು ರೂಪಿಸಲು; ದೇಶದ ಶಕ್ತಿ, ಸಂಸ್ಕೃತಿ, ಸಂಪತ್ತು ಎಲ್ಲವನ್ನೂ ಮರು ವ್ಯಾಖ್ಯಾನ ಮಾಡಲು ಅರವಿಂದರನ್ನು ಭಗವಂತ ಸೃಷ್ಟಿಸಿದಂತಿದೆʼʼ ಎಂದು ಹೇಳಿದರು.

“ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಅರವಿಂದರ ಕುರಿತಾಗಿ ಆಲೋಚನೆ ಮಾಡುವುದಕ್ಕಿಂತ ಪ್ರಶಸ್ತವಾದ ಕೆಲಸ ಮತ್ತೊಂದಿಲ್ಲ. ಕೆಲವರು ಕೆಲವು ವ್ಯಕ್ತಿಗಳ ಪ್ರೇರಣೆಯಿಂದ, ಓದಿನಿಂದ, ಸಂಘಟನೆ, ಸಹವಾಸ ಕಾರಣದಿಂದ ತಮ್ಮ ಆಲೋಚನೆ ಬೆಳೆಸಿಕೊಳ್ಳುತ್ತಾರೆ. ಆದರೆ ಅರವಿಂದರು ಸ್ವಯಂಭೂ ವ್ಯಕ್ತಿತ್ವ ಹೊಂದಿದ್ದರು. ಮನೆಯಲ್ಲೂ ಪೂರಕ ವಾತಾವರಣ ಇರಲಿಲ್ಲ. ದೇಶವೂ ಪರಕೀಯರ ಆಳ್ವಿಕೆಯಲ್ಲಿತ್ತು. ಅವರನ್ನು ತಂದೆ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಕಳಿಸುತ್ತಾರೆ. ಆದರೂ ಅರವಿಂದರು ವೇದ, ಉಪನಿಷತ್ತು ವರ್ಜ್ಯ ಆದ ಸಂದರ್ಭದಲ್ಲಿ ಇವೆಲ್ಲದಕ್ಕೆ ಹೊಸ ಭಾಷ್ಯ ಬರೆದರು. ಅದನ್ನು ಅರವಿಂದರ ಜೀವನ ದರ್ಶನ ಎಂದು ಪ್ರಾಜ್ಞರು ಹೇಳುತ್ತಾರೆ ʼʼ ಎಂದು ಹರಿಪ್ರಕಾಶ್‌ ವ್ಯಾಖ್ಯಾನಿಸಿದರು.

“ಅಹಂಕಾರ ತೊರೆದರೆ ಆತ ಏನನ್ನು ಬೇಕಾದರು ಸಾಧಿಸುತ್ತಾನೆ ಎಂದು ಅರವಿಂದರು ಭಗವದ್ಗೀತೆಗೆ ಹೊಸ ವ್ಯಾಖ್ಯಾನ ನೀಡಿದರು. ಇದು ಕೇವಲ ಧರ್ಮ ಗ್ರಂಥವಲ್ಲ, ಜೀವನ ತತ್ವ ಕಲಿಸುವ ತಾತ್ವಿಕ ವಿಚಾರ ಎಂದರು. ವೇದ, ಉಪನಿಷತ್‌ಗೂ ಹೊಸ ವ್ಯಾಖ್ಯಾನ ನೀಡಿದ್ದರುʼʼ ಎಂದು ವಿವರಿಸಿದರು.

“ಈ ವಯಸ್ಸಿನಲ್ಲೂ ಆಳವಾಗಿ ಅಧ್ಯಯನ ಮಾಡಿ ಲೇಖನ, ಪುಸ್ತಕಗಳನ್ನು ಬರೆಯುವ ನಿಮ್ಮ ಶಕ್ತಿಯ ರಹಸ್ಯವೇನು ಏನು ಅನೇಕ ಸಂದರ್ಭದಲ್ಲಿ ಕಾ.ಶ್ರೀ.ನಾಗರಾಜ ಅವರನ್ನು ಕೇಳಿದ್ದೇನೆ. ಅದಕ್ಕೆ ಅವರ ಮುಗುಳು ನಗೆಯೇ ಉತ್ತರವಾಗಿರುತ್ತಿತ್ತು. ಅವರ ನಿರಂತರವಾದ ಓದು, ಬರವಣಿಗೆಯೇ ಅವರ ದೇಹ, ಮನಸ್ಸು ಹಾಗೂ ಬುದ್ಧಿಯ ಆರೋಗ್ಯದ ಗುಟ್ಟು ಎಂದು ಭಾವಿಸುತ್ತೇನೆ, ʼʼ ಎಂದವರು ನೆನಪಿಸಿಕೊಂಡರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ “ಎರಡು ಕಾರಣಗಳಿಗಾಗಿ ನಾನು ಕಾರ್ಯಕ್ರಮಕ್ಕೆ ಬಂದಿರುವೆ. ಒಂದು ಕಾ.ಶ್ರೀ. ನಾಗರಾಜ ಅವರಿಗಾಗಿ. ಮತ್ತೊಂದು, ಇತ್ತೀಚಿನ ದಿನಗಳಲ್ಲಿ ನನ್ನ ಓದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅರವಿಂದರ ಬಗ್ಗೆ ಒಂದಿಷ್ಟಾದರೂ ಕಿವಿಗೆ ಬಿದ್ದರೆ ಉಪಯೋಗವಾಗಬಹುದು ಎಂಬ ಕಾರಣಕ್ಕೆ ಬಂದಿದ್ದೇನೆʼʼ ಎಂದರು.

“ಸ್ವತಂತ್ರ ಭಾರತದ 75ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ʼಮಂತ್ರದ್ರಷ್ಟ ಅರವಿಂದ ಘೋಷ್ʼ ಪುಸ್ತಕ ಲೋಕಾರ್ಪಣೆಗೊಂಡಿರುವುದು ಸಂತಸದ ಸಂಗತಿʼʼ ಎಂದು ಸಚಿವರು ಹೇಳಿದರು.

ಇದನ್ನೂ ಓದಿ | ‘ಮಂತ್ರದ್ರಷ್ಟ ಅರವಿಂದ ಘೋಷ್​’ ಪುಸ್ತಕ ಬಿಡುಗಡೆ; ಅರವಿಂದರ ಮಾಹಿತಿ ಬಿಚ್ಚಿಟ್ಟ ಲೇಖಕ ಕಾ.ಶ್ರೀ.ನಾಗರಾಜ

Exit mobile version