ಹಾಸನ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಹಾಸನದ ಯುವ ಉದ್ಯಮಿಯ ಶವ ಕಾಡಿನಲ್ಲಿ ಪತ್ತೆಯಾಗಿದೆ (Young businessman murdered). ಈ ಮೂಲಕ ಆತನನ್ನು ಹಣಕಾಸು ವಿಷಯದಲ್ಲಿ ಮಾತನಾಡಲೆಂದು ಕರೆದೊಯ್ದ ಯುವಕರೇ ಕೊಲೆ ಮಾಡಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.
ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್ ಗೌಡ (26) ಅಲಿಯಾಸ್ ಬಂಗಾರಿ ಕೊಲೆಯಾದ ಉದ್ಯಮಿ. ಅವರ ಶವ ಹಾಸನ ತಾಲೂಕಿನ ಯೋಗೀಹಳ್ಳಿ ಫಾರೆಸ್ಟ್‌ನಲ್ಲಿ ಪತ್ತೆಯಾಗಿದೆ. ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಲಿಖಿತ್ ಗೌಡ ಅವರು ಸ್ನೇಹದ ನೆಲೆಯಲ್ಲಿ ಕೊಟ್ಟ ಸಾಲವೇ ಮುಳುವಾಗಿ ಹೋಗಿದೆ ಎನ್ನಲಾಗಿದೆ.
ಸಾಗರ್ ಜತೆಗಿನ ಹಣಕಾಸು ವ್ಯವಹಾರ
ಲಿಖಿತ್ ಅವರ ಸರ್ವಿಸ್ ಸ್ಟೇಷನ್‌ಗೆ ಟ್ಯಾಂಕರ್ ಸರ್ವಿಸ್‌ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗರ್ ಎಂಬಾತ ಬರುತ್ತಿದ್ದ. ಲಿಖಿತ್ ಮತ್ತು ಸಾಗರ್ ನಡುವೆ ಸ್ನೇಹ ಬೆಳೆದು ಸಾಗರ್ ೨.೫ ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ.
ಹೀಗೆ ಪಡೆದ ಸಾಲವನ್ನು ವಾಪಸ್ ನೀಡದೇ ಸಾಗರ್ ಸತಾಯಿಸುತ್ತಿದ್ದು, ಈ ಸಂಬಂಧವಾಗಿ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಲಿಖಿತ್ ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಸಾಗರ್‌ನ ಬೈಕನ್ನು ಎತ್ತಿಕೊಂಡು ಬಂದಿದ್ದ ಎನ್ನಲಾಗಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಪುನಃ ಜಗಳ ನಡೆದಿತ್ತು.
ಕಾರಿನಲ್ಲಿ ಕರೆದೊಯ್ದ ಸ್ನೇಹಿತರು
ಫೆ. 5ರಂದು ಸಂಜೆ 6.30ರ ಸುಮಾರಿಗೆ ಸಾಗರ್ ಮತ್ತು ಸ್ನೇಹಿತರು ಹಣ ಕೊಡುವುದಾಗಿ ಲಿಖಿತ್ ಗೌಡನನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೆಎ-41-ಎಂಎ-9231 ನಂಬರ್‌ನ ಓಮಿನಿ ಕಾರಿನಲ್ಲಿ ಲಿಖಿತ್ ಗೌಡನನ್ನು ಕರೆದೊಯ್ಯಲಾಗಿದ್ದು, ಬಳಿಕ ಅವರು ನಾಪತ್ತೆಯಾಗಿದ್ದರು.
ನಾಪತ್ತೆಯಾಗುವ ವೇಳೆ ನೇರಳೆ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಲಿಖಿತ್ ಗೌಡ ಅವರ ಫೋನ್ ಆವತ್ತಿನಿಂದಲೇ ಸ್ವಿಚ್ ಆಫ್ ಆಗಿತ್ತು.. ಈ ನಡುವೆ ಸಾಗರ್ ಮತ್ತು ಟೀಮ್ ಬಿ.ಎಂ. ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ಮದ್ಯ ಖರೀದಿಸಿ ತೆರಳಿತ್ತು ಎನ್ನಲಾಗಿದೆ.
ಲಿಖಿತ್ ಗೌಡ ನಾಪತ್ತೆಯಾದ ಬಗ್ಗೆ ಪತ್ನಿ ಮತ್ತು ಕುಟುಂಬಿಕರು ಬಡಾವಣೆ ಠಾಣೆಯಲ್ಲಿ ಕೇಸು ದಾಖಲಿಸಿದ ಬಳಿಕ ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸಿದರು. ಕೆಲವು ಮಾಹಿತಿಗಳ ಆಧಾರದಲ್ಲಿ ಬುಧವಾರ ಮುಂಜಾನೆಯಿಂದಲೇ ನೂರಾರು ಪೊಲೀಸರು ಕಾಡು ಪ್ರದೇಶದಲ್ಲಿ ಹುಡುಕಿದ್ದು, ಅಲ್ಲಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.