ಮಂಗಳೂರು: ಯುವಕ-ಯುವತಿ ಚಾಟಿಂಗ್ ಅವಾಂತರದಿಂದಾಗಿ ಇಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿ ತಪಾಸಣೆ ನಡೆಸಲಾಯಿತು.
ಮಂಗಳೂರು ಏರ್‌ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಯುವತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ಯುವಕ ಮುಂಬಯಿಗೆ ತೆರಳಲು ಏರ್‌ಪೋರ್ಟ್ ಬಂದಿದ್ದ ಎನ್ನಲಾಗಿದ್ದು, ಇಬ್ಬರೂ ಪರಿಚಯಸ್ಥರೇ ಆಗಿದ್ದಾರೆ. ಇಬ್ಬರ ನಡುವಿನ ಚಾಟಿಂಗ್‌ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳು ಉಲ್ಲೇಖವಾಗಿದೆ. ಹೀಗಾಗಿ ಗೊಂದಲದ ವಾತಾವರಣ ಮೂಡಿದೆ.
ಯುವಕ ಮುಂಬಯಿ ವಿಮಾನದಲ್ಲಿ ಕೂತಿದ್ದು, ರನ್ ವೇಯಲ್ಲಿ ಟೇಕಾಫ್‌ಗೆ ವಿಮಾನ ಸಿದ್ಧವಾಗಿತ್ತು. ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್‌ನಲ್ಲಿ ಕುಳಿತಿದ್ದ ಯುವತಿ ಜತೆ ಚಾಟಿಂಗ್ ಮಾಡಿದ್ದಾನೆ. ಚಾಟಿಂಗ್‌ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖವಾಗಿದ್ದರಿಂದ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದು ಮುಂಬಯಿ ವಿಮಾನ ತಡೆದು, ಪ್ರಯಾಣಿಕರನ್ನು ಇಳಿಸಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿ, ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಮಾಷೆಗಾಗಿ ಚಾಟಿಂಗ್ ಮಾಡಿರುವುದಾಗಿ ಯುವಕ-ಯುವತಿ ಹೇಳಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಏರ್‌ಪೋರ್ಟ್‌ಗೆ ಬಂದಿದ್ದ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪಾಸಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Amrit Mahotsav | ಪಂಜಾಬ್‌ನಲ್ಲಿ ಉಗ್ರರ ಜಾಲ ಭೇದಿಸಿದ ಪೊಲೀಸರು, ನಾಲ್ವರ ಬಂಧನ