ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕೋನೆನಹಳ್ಳಿ ಬಳಿ ಹೈಟೆನ್ಷನ್ ಟವರ್ ಏರಿದ ಯುವಕ ವಿದ್ಯುತ್ ಶಾಕ್‌ನಿಂದ (Electric shock) ಮೃತಪಟ್ಟಿದ್ದಾನೆ. ಗ್ರಾಮದ ಅಮೃತ್ (25) ಮೃತ ದುರ್ದೈವಿ.
50 ಅಡಿ ಎತ್ತರದ ಟವರ್ ಏರಿದ್ದ ವೇಳೆ ಈ ಅವಘಡ ನಡೆದಿದೆ. ಯುವಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಟವರ್ ಮೇಲೆ ಯುವಕನ ಮೃತದೇಹವು ನೇತಾಡುತ್ತಿದ್ದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಟವರ್‌ನಿಂದ ಕೆಳಗಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
2 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು; ಗಂಡನಿಂದಲೇ ಕೊಲೆ ಶಂಕೆ
ಬೆಂಗಳೂರು: ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ (Suspicious Death)ಪತ್ತೆಯಾಗಿದ್ದಾಳೆ. ಕೃಷ್ಣವೇಣಿ (26) ಮೃತ ದುರ್ದೈವಿ.
ಕೃಷ್ಣವೇಣಿ ಮೂರು ತಿಂಗಳ ಹಿಂದಷ್ಟೆ ಕೋಲಾರ ಮೂಲದ ಪೃಥ್ವಿರಾಜ್ (30) ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಪೃಥ್ವಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈತನೇ ಕತ್ತು ಹಿಸುಕಿ ಹತ್ಯೆ ಮಾಡಿ ನೇಣು ಹಾಕಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆಯಾದ ಎರಡೇ ತಿಂಗಳಿಗೆ ಪತಿ ಕಿರಿಕಿರಿ ಶುರು ಮಾಡಿದ್ದ. ಮೂರು ತಿಂಗಳಿಗೆ ನಾಲ್ಕೈದು ಬಾರಿ ಜಗಳ ಮಾಡಿ ಕೃಷ್ಣವೇಣಿಯನ್ನು ತವರಿಗೆ ಕಳುಹಿಸಿದ್ದ. ಗುರುವಾರವು ಕುಡಿದು ಬಂದು ಗಲಾಟೆ ಮಾಡಿ ಮಗಳನ್ನು ಹತ್ಯೆ ಮಾಡಿದ್ದಾನೆ. ಕೃಷ್ಣವೇಣಿ ಎರಡು ತಿಂಗಳ ಗರ್ಭಿಣಿ ಆಗಿದ್ದಳು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಪತಿ ಪೃಥ್ವಿರಾಜ್‌ನನ್ನು ಬಂಧಿಸುವಂತೆ ಕಾಡುಗೋಡಿ ಠಾಣೆ ಮುಂದೆ ಕೃಷ್ಣವೇಣಿ ಕುಟುಂಬಸ್ಥರು ಜಮಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ