ರಾಯಚೂರು: ಜಿಲ್ಲೆಯಲ್ಲಿ ಹೆರಿಗೆ ಆಗಬೇಕಿರುವ 151 ಗರ್ಭಿಣಿಯರು ಇದ್ದಾರೆ. ಈಗಾಗಲೇ 21 ಗರ್ಭಿಣಿಯರ ರಕ್ತದ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಜತೆಗೆ 57 ಗರ್ಭಿಣಿಯರ ಮೇಲೆ ನಿಗಾ ಇಡಲಾಗಿದೆ. ಝಿಕಾ ವೈರಸ್ (Zika Virus) ಸೋಂಕು ತಡೆಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲೇ ಮೊದಲ ಝಿಕಾ ವೈರಸ್ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಮಾತನಾಡಿದರು.
ಝಿಕಾ ವೈರಸ್ ಸೋಂಕು ತಡೆಗೆ ಆಸ್ಪತ್ರೆಗಳಲ್ಲಿ ಮುಂಜಾಗ್ರತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೊಟ್ಟಿಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಣೆ ಮಾಡದೆ ಆಗಿಂದಾಗ ಸ್ವಚ್ಛಗೊಳಿಸಲು ಸೂಚನೆ ಕೊಡಲಾಗಿದೆ. ಮುಂಜಾಗ್ರತೆ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಎಲ್ಲ ರೀತಿಯ ಅಧಿಕಾರ ನೀಡಿದ್ದೇವೆ ಎಂದರು.
ಈ ಬಗ್ಗೆ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಸಲಹೆ ಸೂಚನೆ ನೀಡುತ್ತಿದ್ದೇನೆ. ಒಟ್ಟಿನಲ್ಲಿ ರೋಗ ಉಲ್ಬಣಗೊಳ್ಳದಂತೆ ಕ್ರಮ ಆಗಬೇಕು ಎಂದು ಹೇಳಿದರು.
ಸಭೆಯಲ್ಲಿ ಸಚಿವರ ಎಡವಟ್ಟು
ಝಿಕಾ ವೈರಸ್ ನಿಯಂತ್ರಣ ಸಂಬಂಧಿತ ಸಭೆಯಲ್ಲಿ ಸೋಂಕಿತ ಬಾಲಕಿ ಬಗ್ಗೆ ಮಾಹಿತಿ ನೀಡುವಾಗ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ರಾಜ್ಯದಲ್ಲೇ ಮೊದಲ ಝಿಕಾ ವೈರಸ್ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿದೆ. ಜಿಲ್ಲೆಯ 5 ವರ್ಷದ ಬಾಲಕಿಗೆ ಇತ್ತೀಚೆಗೆ ಸೋಂಕು ತಗುಲಿತ್ತು. ಆದರೆ ಈ ಬಗ್ಗೆ, ಸಚಿವರು ಉಲ್ಲೇಖಿಸುವಾಗ, ಸೋಂಕಿತ ಬಾಲಕಿ ಮೃತಪಟ್ಟಿದ್ದಾಳೆ. ಮೃತರ ಮನೆಯವರ ರಕ್ತದ ಮಾದರಿಗಳನ್ನು ಪಡೆಯಲಾಗಿದೆ ಎಂದು ಹೇಳಿದರು. ಈ ವೇಳೆ, ಅಧಿಕಾರಿಗಳು ಯಾವುದೇ ಸಾವು ಆಗಿಲ್ಲ ಎಂದಾಗ, ಸಚಿವರು ತಪ್ಪು ತಿದ್ದಿಕೊಂಡು ಪಾಸಿಟಿವ್ ಬಂದಿದೆ ಎಂದು ಹೇಳಿದ್ದು ಕಂಡುಬಂದಿದೆ.
ಇದನ್ನೂ ಓದಿ | ಬಿ.ಎಸ್. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ