Site icon Vistara News

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಅವಕಾಶ ನೀಡಿ, ಕೇಸರಿ ಶಾಲುಗೆ ನೋ ಎಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಸರ್ಕಾರದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೊಸ ವಸ್ತ್ರಸಂಹಿತೆ ಆದೇಶದಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟ ಸೇರಿದಂತೆ ಸಮವಸ್ತ್ರಕ್ಕೆ ಹೊಂದಿಕೊಳ್ಳುವ ಹಾಗೂ ಧಾರ್ಮಿಕ ಪದ್ಧತಿಗೆ ಅನುಗುಣವಾದ ಸಾಂಪ್ರದಾಯಿಕ ಗುರುತುಗಳನ್ನು ಧರಿಸಲು ಅವಕಾಶ ಕಲ್ಪಿಸಿದೆ. ಆದರೆ ಕೇಸರಿ ಶಾಲು ಹಾಕಿಕೊಂಡು ಬರಲು ಅನುಮತಿ ನೀಡಿರುವುದಿಲ್ಲ. ಈ ನಿಯಮವು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಅನ್ವಯವಾಗಲಿದೆ.
ಕೇಸರಿ ಶಾಲು ಧರಿಸಲು ಅವಕಾಶವಿದೆಯೋ, ಇಲ್ಲವೋ ಎಂಬ ಗೊಂದಲದ ಕುರಿತು ವಿವರಣೆ ನೀಡಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ʼಕೇಸರಿ ಶಾಲು ಧಾರ್ಮಿಕ ವ್ಯಾಪ್ತಿಗೆ ಬರುವುದಿಲ್ಲ. ನಾನು ನಾರಾಯಣ ಗುರುಗಳ ವಿಚಾರ ವೇದಿಕೆಯಲ್ಲಿದ್ದೇನೆ. ನಾವು ಏನಾದರೂ ಕಾರ್ಯಕ್ರಮ ಮಾಡಿದರೆ, ಹಳದಿ ಶಾಲು ಧರಿಸುತ್ತೇವೆ. ರೈತ ಸಂಘದವರು ಹಸಿರು ಶಾಲು ಹಾಕುತ್ತಾರೆ. ಅದನ್ನೆಲ್ಲಾ ಇಲ್ಲಿ ಚರ್ಚೆ ಮಾಡಿದರೆ, ಮಕ್ಕಳ ಮೇಲೆ ಒತ್ತಡ ಬೀರುತ್ತದೆ. ಧಾರ್ಮಿಕವಾಗಿ ಮನೆಯಲ್ಲಿರುವ ಸಂಪ್ರದಾಯಗಳಿಗೆ ಅವಕಾಶ ಕಲ್ಪಿಸಲಾಗಿದೆ,ʼ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ನಾಯಕರು, ಚುನಾವಣಾ ಪೂರ್ವದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಭರವಸೆಗೆ ಪೂರಕವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಸಾಕಷ್ಟು ಪ್ರಮಾಣದಲ್ಲಿ ಬೆಂಬಲಿಸದ ಕಾರಣ, ಅವರ ಮನವೊಲಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಸಿಎಂ ಪ್ರತಿಕ್ರಿಯೆ:
ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು. ಪ್ರಸ್ತುತ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಹೊಸದಾಗಿ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣ ಏನು?
2021ರಲ್ಲಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್‌ ಧರಿಸಿದ ಕಾರಣಕ್ಕೆ 6 ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇಲ್ಲಿಂದ ಹೊತ್ತಿದ ಹಿಜಾಬ್‌ ಕಿಡಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಜೊತೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿತ್ತು. 2022ರಲ್ಲಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿ ಆದೇಶ ಹೊರಡಿಸಿತ್ತು.

Exit mobile version