ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರಿಗೆ ಒಳಮೀಸಲಾತಿ ನೀಡುವ ಬದಲು ಗೊಂದಲ ಸೃಷ್ಟಿಸಿ ವಿಷಬೀಜ ಬಿತ್ತಿ ಬೀದಿಯಲ್ಲಿ ನಿಂತು ಬಡಿದಾಡುವಂತೆ ಮಾಡಿದೆ. ನಾಡಿನ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂದು ಕೆರಯಿಸಿಕೊಳ್ಳಲು ಅವರಿಗೆ ಅರ್ಹತೆ ಇಲ್ಲ. ಅವರು ದಲಿತ ಸಮುದಾಯಗಳಿಗೆ ದೊಡ್ಡ ಮೋಸ ಮಾಡುತ್ತಿದ್ದಾರೆ.
30 ವರ್ಷಗಳಿಂದ ಒಳಮೀಸಲಾತಿಗೆ ಹೋರಾಟ ನಡೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿ ಮತ್ತು ಎಸ್‍ಟಿ ಮೀಸಲಾತಿ ಹೆಚ್ಚಳ ಆಗಬೇಕು ಎಂಬ ಬೇಡಿಕೆ ಇದೆ. ಆದರೆ ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶವನ್ನೇ ಬದಲಿಸಿ ಸರಿಯಾಗಿ ಮೀಸಲಾತಿ ಅನುಷ್ಠಾನ ಮಾಡಲಿಲ್ಲ ಎಂದು ದೂರಿದರು.
ಮೀಸಲಾತಿ ವಿಷಯದಲ್ಲಿ ಜಾತಿಗಳ ಮಧ್ಯೆ ಜಗಳ ಹಚ್ಚಬೇಡಿ. ಕೋರ್ಟ್ ಆದೇಶ ಮಾರ್ಪಾಡು ಮಾಡಿ ಕಡಿಮೆ ಮೀಸಲಾತಿ ನೀಡುವ ನಿಮ್ಮನ್ನು ಅಹಿಂದ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಒಳಮೀಸಲಾತಿಗೆ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಾಗ ನ್ಯಾ. ಸದಾಶಿವ ಆಯೋಗವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿತ್ತು. ಬಿಜೆಪಿ ಸರ್ಕಾರ ಇದ್ದಾಗ ದಲಿತರ ಹೋರಾಟಕ್ಕೆ ಮಾನ್ಯತೆ ನೀಡಿ ಬಸವರಾಜ ಬೊಮ್ಮಾಯಿ ಅವರು ಜನಸಂಖ್ಯೆಗೆ ಅನುಗುಣಾಗಿ ಎಸ್‍ಸಿಗೆ ಶೇ15 ರಿಂದ ಶೇ17, ಎಸ್‍ಟಿಗೆ ಶೇ 3 ದಿಂದ ಶೇ 7 ಕ್ಕೆ ಹೆಚ್ಚಳ
ಮಾಡಿದ್ದರು ಎಂದು ವಿವರಿಸಿದರು.
ಕಾನೂನು ಸಚಿವರಾದ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಂಪುಟದ ಉಪ ಸಮಿತಿ ವರದಿ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಎಸ್‍ಸಿಯಲ್ಲಿ ಮಾದಿಗರು ಮತ್ತು ಸಂಬಂಧಿತ ಜಾತಿಗಳಿಗೆ ಶೇ 6 ಮತ್ತು ಛಲವಾದಿ ಮತ್ತು ಉಪ ಜಾತಿಗಳಿಗೆ ಶೇ. 5.5, ಲಂಬಾಣಿ, ಬೋವಿ, ಕೊರಮ ಕೊರಚ ಸಮುದಾಯಗಳಿಗೆ ಶೇ. 4.5 ಪರ್ಸೆಂಟ್, ಅಲೆಮಾರಿಗೆ ಶೇ.1 ನೀಡಲು 2022 ರಲ್ಲಿ ಎರಡೂ ಸದನದಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮೋದನೆ ಪಡೆದು ಕಾನೂನು ಮಾಡಲಾಗಿತ್ತು. 4 ವರ್ಷಗಳ ಕಾಲ 17 ಮತ್ತು 7 ಪರ್ಸೆಂಟ್ ಎಸ್‍ಟಿ/ ಎಸ್ಸಿಗೆ ಮೀಸಲಾತಿ ಸೌಲಭ್ಯ ಸಿಕ್ಕಿತ್ತು ಎಂದರು.
ಸಿದ್ದರಾಮಯ್ಯ ಸರ್ಕಾರ ನ್ಯಾಯಾಲಯಕ್ಕೆ ಸರಿಯಾಗಿ ಮನವರಿಕೆ ಮಾಡಿಕೊಡದೆ, ಸಾಮಾಜಕ ನ್ಯಾಯದ ಅಡಿ ಸಂವಿಧಾನದ ಆಶಯಗಳಿಗೆ ಅನುಗುಣ ಜಾರಿ ಮಾಡದೆ ಭಾಗಶಃ ತಡೆ ನೀಡಿದ ನಂತರ ಮೆಮೊ ಹಾಕಿದರು. ನಾವು ಹದಿನೇಳು ಮತ್ತು ಏಳು ಪರ್ಸೆಂಟ್ ಕೊಡಲ್ಲ. 1995 ರ ಆದೇಶದ ಅನ್ವಯ 15 ಶೇ.ಎಸ್‍ಸಿಗೆ, 3 ಶೇ ಎಸ್‍ಟಿಗೆ ಕೊಡುತ್ತೇವೆ ಎಂದರು; ಅನುಮತಿ ಕೇಳಿದರು. ವಿಧಿ ಇಲ್ಲದೆ ಒಪ್ಪಿತು. ಯಾವುದೇ ಕೋರ್ಟ್ ಶೇ. 17 ಮತ್ತು ಶೇ. 7 ಕ್ಕೆ ತಡೆ ನೀಡಿಲ್ಲ. ಇವರೇ ಬರೆದುಕೊಟ್ಟು ಕಡಿಮೆ ಮಾಡಿದ್ದಾರೆ. ಆದೇಶ ಮಾರ್ಪಾಡು ಮಾಡಿ ಕಡಿಮೆ ಮಾಡುತ್ತಾರೋ ಅವರು ಅಹಿಂದ ನಾಯಕ ಅಲ್ಲ ಎಂದರು.
ಈ ಹಿಂದೆ ಮಾಡಿದ್ದನ್ನು ಬಿಟ್ಟು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಮಾಡಿ ವರದಿ ಪಡೆದು ವಿಶೇಷ ಸಂಪುಟ ಸಭೆ ಮಾಡಲು ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ವರದಿ ನೀಡಿದ ನ್ಯಾಯಮೂರ್ತಿಗಳಿಗೆ ಏನು ಹೇಳಲು ಬಯಸುತ್ತೀರಿ. ಅವರಿಗೆ ಅವಮಾನ ಮಾಡಿದ್ದಂತೆ ಅಲ್ಲವೇ ಎಂದು ಪ್ರಶ್ನಿಸಿದರು.
2023 ರಲ್ಲಿ ಲಂಬಾಣಿ ಮತ್ತು ಬೋವಿ ಜನಾಂಗವನ್ನು ಎಸ್‍ಸಿ ಪಟ್ಟಿಯಿಂದ ತೆಗೆಯಲು ಬೊಮ್ಮಾಯಿ ಸರ್ಕಾರ ಶಿಫಾರಸು ಮಾಡಿದೆ ಎಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು, ತಪ್ಪು ತಿಳಿವಳಿಕೆ ನೀಡಿ ಯಡಿಯೂರಪ್ಪ ಅವರ ಮನೆಗೆ ಕಲ್ಲು ಹೊಡೆಸಿದರು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಳಮೀಸಲಾತಿ ನೀಡುವ ಬದಲು ಗೊಂದಲ ಸೃಷ್ಟಿಸುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

