ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಭೂಗತರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದ ಅವರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇರಾನ್ ಮೇಲೆ ನಡೆದ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ಮೇಲೂ ದಾಳಿ ನಡೆದಿದ್ದು, ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮೊಜ್ತಬಾ ಅವರಿಗೆ ಭಾರಿ ಪ್ರಮಾಣದ ಗಾಯಗಳಾಗಿದ್ದು, ಅವರು ಕಾಲು ಕಳೆದುಕೊಂಡಿದ್ದಾರೆ. ತುಟಿಗಳು ಮತ್ತು ಮುಖ ಸುಟ್ಟು ಹೋಗಿದೆ. ಪ್ಲಾಸ್ಟಿಕ್ ಸರ್ಜರಿ ಆಗುವವರೆಗೂ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. ಆದರೂ ಮೊಜ್ತಬಾ ಮಾನಸಿಕವಾಗಿ ಅತ್ಯಂತ ಸದೃಢ, ತೀಕ್ಷ್ಣಮತಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಯೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಮೊಜ್ತಬಾ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ಸ್‌ನ ಜನರಲ್‌ಗಳನ್ನು ಅವಲಂಬಿಸಿದ್ದಾರೆ. ರೆವಲ್ಯೂಶನರಿ ಗಾರ್ಡ್ಸ್ ಕಾರ್ಪ್ ಮಂಡಳಿ ನಿರ್ದೇಶಕರಾಗಿರುವ ಮೊಜ್ತಬಾ ಅವರು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಮಂಡಳಿ ಸದಸ್ಯರನ್ನೇ ಹೆಚ್ಚು ಅವಲಂಬಿಸಿದ್ದಾರೆ. ಅವರೆಲ್ಲರೂ ಸಾಮೂಹಿಕವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಇರಾನ್ ಮಾಜಿ ಅಧ್ಯಕ್ಷ ಮೆಹಮೂದ್ ಅಹ್ಮದಿನೆಜದ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜಕಾರಣಿ ಅಬ್ಡೊಲ್ರೆಜಾ ದವಾರು ತಿಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕ ನಡೆಸಿದ ದಾಳಿಯಲ್ಲಿ ಅವರು ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿರುವ ಮೊಜ್ತಬಾ, ಭೇಟಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮೊಜ್ತಬಾ ಅವರ ಭೇಟಿಗೆ ರಾಜಕೀಯ ನಾಯಕರು ಸೇರಿದಂತೆ ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ. ಆರೋಗ್ಯ ಸಚಿವರು, ಸ್ವತಃ ಹೃದ್ರೋಗದ ವೈದ್ಯರೂ ಆಗಿರುವ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ವೈದ್ಯಕೀಯ ಚಿಕಿತ್ಸೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮೊಜ್ತಬಾ ಅವರ ಒಂದು ಕಾಲಿಗೆ ಮೂರು ಶಸ್ತ್ರಚಿಕಿತ್ಸೆ ಆಗಿದ್ದು, ಕೃತಕ ಕಾಲನ್ನು ಬಳಸುತ್ತಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ತುಟಿಗಳು ಮತ್ತು ಮುಖ ಗಂಭೀರವಾಗಿ ಸುಟ್ಟುಹೋಗಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ.ಲಿಖಿತ ಹೇಳಿಕೆ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಆರೋಗ್ಯ ಸ್ಥಿತಿ ಗಂಭೀರ?; ಕೃತಕ ಕಾಲು,ಸೀಳು ತುಟಿ, ಒಡೆದ ಮುಖ…

