ನೀಟ್ ಪರೀಕ್ಷೆ ರದ್ದು ವಿಚಾರದಲ್ಲಿ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಕಿಡಿಕಾರಿದ್ದಾರೆ.
ಶ್ರಮವಹಿಸಿ ವಿದ್ಯಾರ್ಥಿಗಳು ಬರೆದಿದ್ದ ನೀಟ್ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇದರ ಸಂಪೂರ್ಣ ಹೊರೆಯನ್ನು ನೇರವಾಗಿ ಕೇಂದ್ರ ಸರ್ಕಾರ ಹೊರಬೇಕು ಎಂದಿದ್ದಾರೆ.
ವಿದ್ಯಾರ್ಥಿಗಳು ಕಷ್ಟಪಟ್ಟು ಪರೀಕ್ಷೆ ಬರೆದಿದ್ದು, ಅವರ ಬಾಳಲ್ಲಿ ಯಾರೂ ಚೆಲ್ಲಾಟವಾಡಬಾರದು. ನೀಟ್ ಪರೀಕ್ಷೆ ವೈಫಲ್ಯದ ಕುರಿತು ಬಿಜೆಪಿ ನಾಯಕರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಎನ್‌ಟಿಎ ಸಾಕಷ್ಟು ಬಾರಿ ನೀಟ್ ಪರೀಕ್ಷೆ ನಡೆಸಲು ವಿಫಲವಾಗಿದ್ದು, ಅಯಾ ರಾಜ್ಯಗಳಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು, ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಮಾತನಾಡಬೇಕು. ಜೊತೆಗೆ, ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಸಚಿವ ಸುಧಾಕರ್ ಆಗ್ರಹಿಸಿದ್ದಾರೆ.

