ಉತ್ತರಪ್ರದೇಶ: ಜನವರಿಯಲ್ಲಿ ಉದ್ಘಾಟನೆಯಾದ ಅಯೋಧ್ಯೆ (ayodhya) ರಾಮ ಮಂದಿರದಲ್ಲಿ (ram mandir) ಪ್ರತಿಷ್ಠಾಪನೆಯಾಗಿರುವ ರಾಮ ಲಲ್ಲಾನ (ram lalla) ಜನ್ಮದಿನದವಾದ ರಾಮನವಮಿ (ram navami) ಪ್ರಯುಕ್ತ ಬುಧವಾರ ಮಧ್ಯಾಹ್ನ ಸೂರ್ಯ ತಿಲಕವನ್ನು (Surya Tilak) ಇಡಲಾಗಿದೆ. ದೇಶದ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದರು. ಇಶ್ವಾಕು ಕುಲದ ಭಗವಾನ್ ಶ್ರೀರಾಮನು ಸೂರ್ಯ ದೇವನ ವಂಶಸ್ಥರೆಂದು ನಂಬಲಾಗುತ್ತದೆ. ರಾಮನವಮಿ ಪ್ರಯುಕ್ತ ಭಗವಾನ್ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ರಾಮ್ ಲಲ್ಲಾನಿಗೆ ಸೂರ್ಯ ತಿಲಕ ಅಥವಾ ಸೂರ್ಯ ಅಭಿಷೇಕವನ್ನು ನಡೆಸಲಾಯಿತು. ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಕೆಲವು ನಿಮಿಷಗಳ ಕಾಲ ಬೆಳಗಿತ್ತು.
ಸೂರ್ಯ ತಿಲಕವಿಟ್ಟದ್ದು ಹೇಗೆ ?
ರಾಮಲಲ್ಲಾನಿಗೆ ಸೂರ್ಯ ತಿಲಕವಿಡಲು ಐಐಟಿ-ರೂರ್ಕಿಯ ವಿಜ್ಞಾನಿಗಳ ವಿಶೇಷ ತಂತ್ರಜ್ಞಾನವನ್ನು ಬಳಸಿದ್ದಾರೆ. ನಿರ್ದಿಷ್ಟ ಸಮಯದಲ್ಲಿ ರಾಮ್ ಲಲ್ಲಾನ ಹಣೆಯ ಮೇಲೆ ಸೂರ್ಯನ ಕಿರಣಗಳನ್ನು ನಿಖರವಾಗಿ ಬೀಳಲು ಉತ್ತಮ ಗುಣಮಟ್ಟದ ಕನ್ನಡಿ ಮತ್ತು ಮಸೂರಗಳನ್ನು ಹೊಂದಿರುವ ಉಪಕರಣವನ್ನು ಬಳಸಲಾಗಿದೆ. ಈ ಉಪಕರಣವು ಪ್ರತಿಫಲಿತ ಕನ್ನಡಿಗಳು ಮತ್ತು ಲೆನ್ಸ್‌ಗಳೊಂದಿಗೆ ಗೇರ್‌ಬಾಕ್ಸ್ ಜೋಡಿಸಲಾಗಿದೆ. ದೇವಳದ ಶಿಕಾರದ ಬಳಿ ಮೂರನೇ ಮಹಡಿಯಿಂದ ಸೂರ್ಯನ ಕಿರಣಗಳನ್ನು ನಿರ್ದಿಷ್ಟ ಸಮಯದಲ್ಲಿ ‘ಗರ್ಭಗೃಹ’ ದೊಳಗೆ ಇದು ಪ್ರತಿಫಲಿಸಲು ಸಹಾಯ ಮಾಡುತ್ತದೆ.
LIVE: Lord Ram's 'Surya Tilak' in #Ayodhya https://t.co/9Ul9W2WNfO pic.twitter.com/HPhWMUa5hq
— DD News (@DDNewslive) April 17, 2024
ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!
ಚಂದ್ರನ ಕ್ಯಾಲೆಂಡರ್ ಅನ್ನು ಆಧರಿಸಿ ಪ್ರತಿ ವರ್ಷ ರಾಮನವಮಿಯಂದು ಸೂರ್ಯನ ಕಿರಣಗಳು ರಾಮನ ಹಣೆಗೆ ತಿಲಕವಿಡಲು ಸಹಾಯವಾಗಳು ಗೇರ್‌ಬಾಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿರುವ ಆಪ್ಟಿಕಲ್ ಪಥ, ಪೈಪಿಂಗ್ ಮತ್ತು ಟಿಪ್-ಟಿಲ್ಟ್ ಗಳು ಸುಧೀರ್ಘ ಬಾಳಿಕೆ ಬರಲು ಮತ್ತು ಕಡಿಮೆ ನಿರ್ವಹಣೆಗಾಗಿ ಸ್ಪ್ರಿಂಗ್‌ಗಳಿಲ್ಲದೆ ವಿನ್ಯಾಸಗೊಳಿಸಲಾಗಿದೆ.
ಎರಡು ಬಾರಿ ಪ್ರಯೋಗ
ರಾಮಲಲ್ಲಾನಿಗೆ ಸೂರ್ಯಾಭಿಷೇಕ ನಡೆಸಲು ವಿಜ್ಞಾನಿಗಳು ಎರಡು ಬಾರಿ ಏಪ್ರಿಲ್ 8 ಮತ್ತು 13ರಂದು ಸೂರ್ಯ ತಿಲಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ಪ್ರಯೋಗ ನಡೆಸಿದ್ದರು.
ಯಾರ ಪರಿಶ್ರಮ ?
ರಾಮ ಮಂದಿರದಲ್ಲಿ ರಾಮಲಲ್ಲಾನಿಗೆ ಸೂರ್ಯ ತಿಲಕವಿಡಲು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ತಾಂತ್ರಿಕ ಬೆಂಬಲ ನೀಡಿದ್ದು, ಬೆಂಗಳೂರು ಮೂಲದ ಕಂಪೆನಿಯೊಂದು ಆಪ್ಟಿಕಾ ಮಸೂರ ಮತ್ತು ಹಿತ್ತಾಳೆ ಟ್ಯೂಬ್ ಗಳನ್ನು ಒದಗಿಸಿತ್ತು.
ಸಿಬಿಆರ್ ಐ ವಿಜ್ಞಾನಿ ಡಾ. ಪ್ರದೀಪ್ ಚೌಹಾಣ್ ಅವರು ನೀಡಿರುವ ಮಾಹಿತಿಯಂತೆ ಇದು ಸಂಪೂರ್ಣವಾಗಿ ಸೂರ್ಯನದ್ದೇ ಕಿರಣ. ಈ ಕಾರ್ಯವಿಧಾನದಲ್ಲಿ ಯಾವುದೇ ವಿದ್ಯುತ್ ಅಥವಾ ಬ್ಯಾಟರಿ ಅಥವಾ ಕಬ್ಬಿಣವನ್ನು ಬಳಸಲಾಗುವುದಿಲ್ಲ ಎಂದು ಹೇಳಿದ್ದರು.
ಸಾಂಪ್ರದಾಯಿಕ ಭಾರತೀಯ ಮಿಶ್ರಲೋಹವಾದ ಪಂಚಧಾತುವನ್ನು ಸೂರ್ಯ ತಿಲಕ ಉಪಕರಣದಲ್ಲಿಯೂ ಬಳಸಲಾಗಿದೆ. ಇಸ್ರೋದ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್ ನೀಡಿರುವ ಮಾಹಿತಿ ಪ್ರಕಾರ ಸೂರ್ಯನ ಕಿರಣಗಳು ರಾಮ್ ಲಲ್ಲಾನ ಹಣೆಯನ್ನು ಬೆಳಗಿಸುವುದನ್ನು ಆರ್ಕಿಯೋ ಆಸ್ಟ್ರೊನಮಿ, ಮೆಟಾನಿಕ್ ಸೈಕಲ್ ಮತ್ತು ಅನಾಲೆಮ್ಮಾ ಖಚಿತಪಡಿಸುತ್ತದೆ.
ಅನಾಲೆಮ್ಮವು ಎಂಟು ಅಂಕೆಯ ವಕ್ರರೇಖೆಯಾಗಿದ್ದು ಅದು ಭೂಮಿಯ ಓರೆ ಮತ್ತು ಕಕ್ಷೆಯ ಕಾರಣದಿಂದ ವರ್ಷಕ್ಕೆ ಸೂರ್ಯನ ಬದಲಾಗುತ್ತಿರುವ ಸ್ಥಾನವನ್ನು ಟ್ರ್ಯಾಕ್ ಮಾಡುತ್ತದೆ. ಮೆಟೋನಿಕ್ ಚಕ್ರವು ಸುಮಾರು 19 ವರ್ಷಗಳ ಅವಧಿಯಾಗಿದ್ದು ರಾಮ ನವಮಿಯ ದಿನಾಂಕ ಮತ್ತು ಅದು ಬೀಳುವ ‘ತಿಥಿ’ ಒಟ್ಟಿಗೆ ಬರುವುದನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಪುರೋಹಿತ್.
ಹಲವು ದೇವಾಲಯಗಳಲ್ಲೂ ಇದೆ
ಗರ್ಭಗುಡಿಯ ದೇವರಿಗೆ ಸೂರ್ಯ ಅಭಿಷೇಕವನ್ನು ಕೇವಲ ರಾಮ ಮಂದಿರದಲ್ಲಿ ಮಾಡುತ್ತಿಲ್ಲ. ದೇಶದ ಹಲವಾರು ಜೈನ ಮತ್ತು ಹಿಂದೂ ದೇವಾಲಯಗಳಲ್ಲಿ ನಡೆಸಲಾಗುತ್ತದೆ.
ಕರ್ನಾಟಕದ ಬೆಂಗಳೂರಿನಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲೂ ಪ್ರತಿ ಮಕರ ಸಂಕ್ರಾಂತಿಯಂದು, ಸೂರ್ಯಕಿರಣಗಳು ನಂದಿಯ ಪ್ರತಿಮೆಯನ್ನು ಬೆಳಗಿ ಶಿವಲಿಂಗದ ಪಾದಗಳನ್ನು ಮುಟ್ಟಿ ಅಂತಿಮವಾಗಿ ಸಂಪೂರ್ಣ ಶಿವಲಿಂಗವನ್ನು ಆವರಿಸುತ್ತದೆ.
ತಮಿಳುನಾಡಿನಲ್ಲಿರುವ 11-12 ನೇ ಶತಮಾನದ ಸುರಿಯಾನಾರ್ ಕೋವಿಲ್ (ಸೂರ್ಯ) ದೇವಾಲಯದಲ್ಲಿ ಸೂರ್ಯನ ಬೆಳಕು ವರ್ಷದ ಕೆಲವು ಸಮಯ ದೇವಾಲಯದಲ್ಲಿರುವ ಸೂರ್ಯ, ಉಷಾದೇವಿ ಮತ್ತು ಪ್ರತ್ಯೂಷಾ ದೇವಿಯ ಬಿಂಬದ ಮೇಲೆ ಬೀಳುತ್ತದೆ.
ಮಧ್ಯಪ್ರದೇಶದ ಉನವ್ ಬಾಲಾಜಿ ಸೂರ್ಯ ದೇವಸ್ಥಾನದಲ್ಲಿ ದತಿಯಾದಲ್ಲಿ ಉತ್ಸವದ ವೇಳೆ ಮುಂಜಾನೆ ಸೂರ್ಯನ ಮೊದಲ ಕಿರಣಗಳು ನೇರವಾಗಿ ದೇವಾಲಯದ ಗರ್ಭಗುಡಿಯಲ್ಲಿರುವ ವಿಗ್ರಹದ ಮೇಲೆ ಬೀಳುತ್ತವೆ.
ಆಂಧ್ರಪ್ರದೇಶದ ನಾಗಲಾಪುರಂ ಜಿಲ್ಲೆಯಲ್ಲಿರುವ ವಿಷ್ಣುವಿನ ಮತ್ಸ್ಯ ಅವತಾರವನ್ನು ಪ್ರತಿಬಿಂಬಿಸುವ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ವರ್ಷದಲ್ಲಿ ಐದು ದಿನ ಸೂರ್ಯ ಪೂಜಾ ಮಹೋತ್ಸವವನ್ನು ಆಯೋಜಿಸುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ದೇವಾಲಯದೊಳಗಿನ ಗರ್ಭಗೃಹದಲ್ಲಿರುವ ಪ್ರಧಾನ ದೇವತೆಯ ಪಾದಗಳಿಂದ ಹೊಕ್ಕುಳವರೆಗೆ ಚಲಿಸುತ್ತದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರ್ಷದಲ್ಲಿ ಎರಡು ಬಾರಿ ಗರ್ಭಗೃಹವನ್ನು ಸೂರ್ಯನ ಕಿರಣಗಳು ನೇರವಾಗಿ ಗರುಡ ಮಂಟಪದ ಮೂಲಕ ಪ್ರವೇಶಿಸಿ ಮಹಾಲಕ್ಷ್ಮಿ ದೇವಿಯ ಪಾದಗಳ ಮೇಲೆ ಬೀಳುತ್ತವೆ. ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯನ ಸಂಪೂರ್ಣ ಬೆಳಕಿನಿಂದ ಇಡೀ ವಿಗ್ರಹವನ್ನು ಸ್ನಾನ ಮಾಡಿಸಲಾಗುತ್ತದೆ.
ಗುಜರಾತ್ ನಲ್ಲಿರುವ 11 ನೇ ಶತಮಾನದ ಮೊಧೇರಾ ಸೂರ್ಯ ದೇವಾಲಯದಲ್ಲಿ ವರ್ಷಕ್ಕೆ ಎರಡು ಬರಿ ಸೂರ್ಯಕಿರಣಗಳು ದೇವಾಲಯವನ್ನು ಪ್ರವೇಶಿಸಿ ಸೂರ್ಯ ದೇವರ ವಿಗ್ರಹದ ಮೇಲೆ ಬೀಳುತ್ತವೆ.
ಅಹಮದಾಬಾದ್‌ನ ಕೋಬಾ ಜೈನ ದೇವಾಲಯದಲ್ಲಿ ವಾರ್ಷಿಕವಾಗಿ ಸೂರ್ಯಾಭಿಷೇಕ ನಡೆಯುತ್ತದೆ. ವಾರ್ಷಿಕ ಸಮಾರಂಭದಲ್ಲಿ ಸೂರ್ಯಕಿರಣಗಳು ನೇರವಾಗಿ ಮಹಾವೀರಸ್ವಾಮಿಯ ಅಮೃತಶಿಲೆಯ ಪ್ರತಿಮೆಯ ಹಣೆಯ ಮೇಲೆ ಮೂರು ನಿಮಿಷಗಳ ಕಾಲ ಬೀಳುತ್ತವೆ.
ರಾಜಸ್ಥಾನದಲ್ಲಿ ಅರಾವಳಿಯಲ್ಲಿರುವ 15ನೇ ಶತಮಾನದ ರಣಕ್‌ಪುರ ದೇವಾಲಯದ ಗರ್ಭಗುಡಿಗೆ ಸೂರ್ಯನ ಬೆಳಕು ನೇರವಾಗಿ ಬರುವಂತೆ ಬಿಳಿ ಅಮೃತಶಿಲೆಗಳಿಂದ ವಿನ್ಯಾಸಗೊಳಿಸಲಾಗಿದೆ.
ಒಡಿಶಾದಲ್ಲಿರುವ 13 ನೇ ಶತಮಾನದ ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ಸೂರ್ಯೋದಯದ ವೇಳೆ ಸೂರ್ಯನ ಬೆಳಕು ದೇವಾಲಯಕ್ಕೆ ಸಂಪೂರ್ಣ ಸ್ನಾನ ಮಾಡಿಸುತ್ತದೆ. ದೇವಾಲಯದ ಮುಖ್ಯ ದ್ವಾರವನ್ನು ಸೂರ್ಯ ಕಿರಣಗಳು ಸ್ಪರ್ಶಿಸುತ್ತದೆ. ಅನಂತರ ಅದರ ವಿವಿಧ ದ್ವಾರಗಳ ಮೂಲಕ ಗರ್ಭಗೃಹದೊಳಗೆ ಪ್ರವೇಶಿಸುತ್ತದೆ.