Site icon Vistara News

Syed Abdul Rahim: ಯಾರು ʼಮೈದಾನ್ʼ ಚಿತ್ರದ ಈ ಅಸಲಿ ಹೀರೊ ಸೈಯದ್ ಅಬ್ದುಲ್ ರಹೀಮ್?

Syed Abdul Rahim

ಮುಂಬಯಿ: ನಟ (actor) ಅಜಯ್ ದೇವಗನ್ (ajay devgan) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ʼಮೈದಾನ್ʼ (Maidaan) ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಬಿಡುಗಡೆಗೆ ಕೋರ್ಟ್ ತಡೆ ನೀಡಿದ್ದರೂ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ (Syed Abdul Rahim) ಅವರ ಜೀವನ ಕಥೆಯನ್ನು ಆಧರಿಸಿರುವ ಈ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಇದರೊಂದಿಗೆ ಸೈಯದ್ ಅಬ್ದುಲ್ ರಹೀಮ್ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆ.

ಇವತ್ತು ಭಾರತೀಯ ಫುಟ್ಬಾಲ್ ಪರಿಸ್ಥಿತಿ ಚೆನ್ನಾಗಿ ಇಲ್ಲದೇ ಇದ್ದರೂ ಒಂದು ಕಾಲದಲ್ಲಿ ಇದು ಭಾರತದ ಅತ್ಯಂತ ಶ್ರೀಮಂತ ಆಟವಾಗಿತ್ತು. ಭಾರತೀಯ ಫುಟ್‌ಬಾಲ್‌ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಸೈಯದ್ ಅಬ್ದುಲ್ ರಹೀಮ್ ಆಗ ಎಲ್ಲರ ಗಮನ ಸೆಳೆದಿದ್ದರು. ಆದರೆ ಅವರಿಗೆ ಮೆಚ್ಚುಗೆ ಸಿಕ್ಕಿದ್ದು ಕಡಿಮೆ. ಈ ಚಿತ್ರದ ಮೂಲಕ ಈಗ ಎಲ್ಲರ ಗಮನವನ್ನು ಅವರು ಸೆಳೆದಿದ್ದಾರೆ.

ಇದನ್ನೂ ಓದಿ: Ajay Devgn:‌ ಕನ್ನಡಿಗನ ಕಥೆ ಕದ್ದರಾ ಅಜಯ್‌ ದೇವಗನ್‌? ‘ಮೈದಾನ್’ ಚಿತ್ರಕ್ಕೆ ಕೋರ್ಟ್ ತಡೆ!

ಹೈದರಾಬಾದ್‌ ನಿವಾಸಿ:

ರಹೀಮ್ ಸಾಬ್ ಎಂದೇ ಕರೆಯಲ್ಪಡುತ್ತಿದ್ದ ಸೈಯದ್ ಅಬ್ದುಲ್ ರಹೀಮ್ 1909ರ ಆಗಸ್ಟ್ 17ರಂದು ಹೈದರಾಬಾದ್‌ನಲ್ಲಿ ಜನಿಸಿದ್ದರು. ಅನೇಕ ಕಾಲೇಜುಗಳ ಫುಟ್‌ಬಾಲ್ ತಂಡಗಳನ್ನು ಪ್ರತಿನಿಧಿಸುತ್ತಿದ್ದ ಅವರು ಕಾಚಿಗುಡ ಮಿಡಲ್ ಸ್ಕೂಲ್, ಉರ್ದು ಷರೀಫ್ ಸ್ಕೂಲ್, ದಾರುಲ್-ಉಲ್-ಉಲೂಮ್ ಹೈಸ್ಕೂಲ್ ಮತ್ತು ಚಾದರ್‌ಘಾಟ್ ಹೈಸ್ಕೂಲ್‌ ನಲ್ಲಿ ಶಿಕ್ಷಕರಾಗಿದ್ದರು.

ಇಲ್ಲಿದೆ ಮೈದಾನ್​ ಟ್ರೈಲರ್​

1943ರಲ್ಲಿ ಹೈದರಾಬಾದ್ ಫುಟ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿ ಮತ್ತು ಮುಖ್ಯ ತರಬೇತುದಾರರಾಗಿ ಆಯ್ಕೆಯಾದಾಗಲೇ ಎಲ್ಲರಿಗೂ ಅವರ ಪರಿಚಯವಾಗಿತ್ತು. ಜೀವನದ ಕೊನೆಯವರೆಗೂ ಅವರು ಈ ಅಧಿಕಾರದಲ್ಲಿ ಮುಂದುವರಿದರು. 1950ರಲ್ಲಿ ಅವರು ಹೈದರಾಬಾದ್ ಪೊಲೀಸ್ ಕೋಚ್ ಆಗಿ ನೇಮಕಗೊಂಡಿದ್ದು, ಅವರ ಮಾರ್ಗದರ್ಶನದಲ್ಲಿ ತಂಡವು ರೋವರ್ಸ್ ಕಪ್‌ನಲ್ಲಿ ಸತತ ಐದು ಬಾರಿ ಜಯಗಳಿಸಿತು ಮತ್ತು ನಾಲ್ಕು ಬಾರಿ ಡ್ಯುರಾಂಡ್ ಕಪ್ ಅನ್ನು ಎತ್ತಿಹಿಡಿಯಿತು.

ಭಾರತೀಯ ತಂಡವನ್ನು ಎತ್ತರಕ್ಕೆ ಒಯ್ದಿದ್ದರು:

1950ರಿಂದ ಭಾರತೀಯ ಫುಟ್‌ಬಾಲ್ ತಂಡಕ್ಕೆ ತರಬೇತಿ ನೀಡಲು ಪ್ರಾರಂಭಿಸಿದ ಅವರು, 13 ವರ್ಷಗಳಲ್ಲಿ ಭಾರತೀಯ ಫುಟ್‌ಬಾಲ್‌ ತಂಡವನ್ನು ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ದಿದ್ದರು. ಇದನ್ನು ಈಗ ‘ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗ’ ಎಂದು ಪರಿಗಣಿಸಲಾಗಿದೆ.

ಭಾರತೀಯ ಫುಟ್‌ಬಾಲ್‌ನ ವಾಸ್ತುಶಿಲ್ಪಿ ಎಂದೇ ಕರೆಯಲಾಗುವ ರಹೀಮ್ 1950- 1963ರವರೆಗೆ ಭಾರತೀಯ ಫುಟ್‌ಬಾಲ್‌ನ ವ್ಯವಸ್ಥಾಪಕರಾಗಿದ್ದರು. ಇವರ ನೇತೃತ್ವದಲ್ಲಿ ಅನೇಕ ಸುಧಾರಿತ ಕಾರ್ಯಕ್ರಮಗಳನ್ನು ಅಳವಡಿಸಲಾಯಿತು. ಭಾರತೀಯ ಫುಟ್ಬಾಲ್ ತಂಡವು 1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಫುಟ್‌ಬಾಲ್‌ನ ಸೆಮಿ-ಫೈನಲ್‌ಗೆ ಅರ್ಹತೆ ಪಡೆದು ಆ ಗೌರವಾನ್ವಿತ ಮೈಲುಗಲ್ಲನ್ನು ತಲುಪಿದ ಮೊದಲ ಏಷ್ಯಾದ ತಂಡವಾಯಿತು.

ಆ ಗೆಲುವಿಗೆ ನೆಹರೂ ಸಾಕ್ಷಿಯಾಗಿದ್ದರು:

1950ರ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಲು ನಿರಾಕರಿಸಿದ ಬಳಿಕ 1951ರ ಏಷ್ಯನ್ ಗೇಮ್ಸ್‌ನಲ್ಲಿ ಬಲಿಷ್ಠ ಇರಾನ್ ತಂಡವನ್ನು ಸೋಲಿಸಿ ಭಾರತವು ಚಿನ್ನವನ್ನು ಗೆದ್ದುಕೊಂಡಿತು. ಈ ಸುಂದರ ಕ್ಷಣಕ್ಕೆ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಸಾಕ್ಷಿಯಾಗಿದ್ದರು.

ಏಷ್ಯನ್ ಫುಟ್ಬಾಲ್ ಗೆ ರಹೀಮ್ ಸಾಬ್ ಅವರ ದೂರದೃಷ್ಟಿ ಯೋಜನೆಗಳು ಸಾಕಷ್ಟಿದೆ. ಫುಟ್‌ಬಾಲ್‌ನ ‘ಒನ್-ಟಚ್’ ಶೈಲಿಯನ್ನು ಅನುಸರಿಸಲು ಒತ್ತು ನೀಡಿದ್ದ ಅವರು ತರಬೇತಿಗೆ ಹೆಚ್ಚು ಗಮನ ನೀಡುತ್ತಿದ್ದರು. ಅವರ ತರಬೇತಿ ಅವಧಿಯಲ್ಲಿ ಭಾರತ ತಂಡ ಏಷ್ಯನ್ ಫುಟ್‌ಬಾಲ್‌ನ ಉತ್ತುಂಗಕ್ಕೆ ಏರಿತ್ತು.

ಇವರ ಕಾಲದಲ್ಲಿ ಭಾರತೀಯ ಫುಟ್‌ಬಾಲ್ ತಂಡವು ಚುನ್ನಿ ಗೋಸ್ವಾಮಿ, ಪಿ.ಕೆ. ಬ್ಯಾನರ್ಜಿ, ಬಲರಾಮ್, ಫ್ರಾಂಕೋ ಮತ್ತು ಅರುಣ್ ಘೋಷ್ ಅವರಂತಹ ಪ್ರಸಿದ್ಧ ಆಟಗಾರರನ್ನು ಒಳಗೊಂಡಿತ್ತು.

ಆಟಗಾರರನ್ನು ಬೆಳೆಸುವ ಉದ್ದೇಶ ಹೊಂದಿದ್ದ ಅವರು, ನಾವು ನಿರ್ಮಾಪಕರು ಅಥವಾ ತರಬೇತುದಾರರನ್ನು ಉತ್ಪಾದಿಸಬೇಕು ಅಥವಾ ತರಬೇತಿ ನೀಡಬೇಕು ಎನ್ನುತ್ತಿದ್ದರು.

ಭಾರತೀಯ ಫುಟ್‌ಬಾಲ್‌ನ ಶ್ರೀಮಂತ ಇತಿಹಾಸದ ಬಗ್ಗೆ ತಿಳಿದಿರುವ ಅಥವಾ ಇಲ್ಲದಿರುವವರಿಗೆ ʼಮೈದಾನ್ʼ ಚಿತ್ರದ ಮೂಲಕ ರಹೀಮ್ ಸಾಬ್‌ನ ಅವರ ಪರಿಚಯವಂತೂ ಆಗಿದೆ.

Exit mobile version