Site icon Vistara News

Teacher Suspended: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

Teacher Suspended


ಹಿಂದೂ ಧರ್ಮದಲ್ಲಿ ಸಿಂಧೂರ ಮತ್ತು ಮಂಗಳಸೂತ್ರವನ್ನು ಮದುವೆಯಾದ ಹೆಣ್ಣುಮಕ್ಕಳು ಧರಿಸಬೇಕು ಎಂಬ ಸಂಪ್ರದಾಯವಿದೆ. ಇದು ಬಹಳ ಹಿಂದಿನ ಕಾಲದಿಂದಲೂ ಬಂದಂತಹ ಸಂಪ್ರದಾಯ. ಇಂದಿಗೂ ಬಹುತೇಕ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಕ್ಕಳು ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಪಾಶ್ಚಿಮಾತ್ಯರ ಜೀವನಶೈಲಿಯನ್ನು ಅನುಸರಿಸುತ್ತಾ ಈ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಇಂತಹ ಸಂಪ್ರದಾಯವನ್ನು ಪಾಲಿಸದಂತೆ ಶಿಕ್ಷಕಿಯೊಬ್ಬರು ಜನರಿಗೆ ಸಲಹೆ ನೀಡಿದ್ದಾರೆ. ರಾಜಸ್ಥಾನದ ಮಹಿಳಾ ಶಿಕ್ಷಕಿ ಬುಡಕಟ್ಟು ಮಹಿಳೆಯರಿಗೆ ಸಿಂಧೂರ ಮತ್ತು ಮಂಗಳಸೂತ್ರವನ್ನು ಧರಿಸದಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ರಾಜಸ್ಥಾನ ಶಿಕ್ಷಣ ಇಲಾಖೆ ಅವರನ್ನು ಕೆಲಸದಿಂದ ಅಮಾನತು( Teacher Suspended)ಗೊಳಿಸಿದೆ ಎಂದು ವರದಿಯಾಗಿದೆ.

ಜುಲೈ 19ರಂದು ಬನ್ಸ್ವಾರಾದ ಮಂಗರ್ ಧಾಮ್‍ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಶಿಕ್ಷಕಿ ದಾಮೋರ್ ಬುಡಕಟ್ಟು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಲವು ಸಾಂಪ್ರದಾಯಿಕ ಹಿಂದೂ ಆಚರಣೆಗಳನ್ನು ತಿರಸ್ಕರಿಸುವಂತೆ ಸಲಹೆ ನೀಡಿದರು. ಶಿಕ್ಷಕಿ ಮೇನಕಾ ದಾಮೋರ್ ತಮ್ಮ ಭಾಷಣದಲ್ಲಿ, “ಬುಡಕಟ್ಟು ಕುಟುಂಬಗಳು ಸಿಂಧೂರವನ್ನು ಹಚ್ಚುವುದಿಲ್ಲ, ಅವರು ಮಂಗಳಸೂತ್ರವನ್ನು ಧರಿಸುವುದಿಲ್ಲ. ಬುಡಕಟ್ಟು ಸಮಾಜದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದಿನಿಂದ, ಎಲ್ಲಾ ಉಪವಾಸಗಳನ್ನು ಆಚರಿಸುವುದನ್ನು ನಿಲ್ಲಿಸಿ. ನಾವು ಹಿಂದೂಗಳಲ್ಲ” ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಬುಡಕಟ್ಟು ಸಮುದಾಯದ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿಯ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಶಿಕ್ಷಕಿ ದಾಮೋರ್ ಅವರನ್ನು ಅಮಾನತುಗೊಳಿಸಿದ್ದಾರೆ. ರಾಜಸ್ಥಾನ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದ ಮೇಲೆ ದಾಮೋರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶಿಕ್ಷಕಿ ಮೇನಕಾ ದಾಮೋರ್ ಅವರು ಆದಿವಾಸಿ ಪರಿವಾರ ಸಂಸ್ಥೆಯ (Adivasi Parivar Sanstha )ಸ್ಥಾಪಕಿಯಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ಸಾದಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ:ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

ಮಂಗರ್ ಧಾಮ್‍ನಲ್ಲಿ ನಡೆದ ರ್ಯಾಲಿ ವಿಶಾಲವಾದ ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ವೇದಿಕೆಯಾಯಿತು. ಇದು ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಬುಡಕಟ್ಟು ಸಮುದಾಯಗಳಿಂದ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ. ದಾಮೋರ್ ಅವರ ವಿವಾದಾತ್ಮಕ ಭಾಷಣದ ಜೊತೆಗೆ, ಭಿಲ್ ರಾಜ್ಯವನ್ನು ರಚಿಸಬೇಕೆಂದು ಪ್ರತಿಪಾದಿಸುವ ರಾಜಕೀಯ ನಿರ್ಣಯವನ್ನು ಸಹ ಈ ಸಂದರ್ಭದಲ್ಲಿ ಅಂಗೀಕರಿಸಲಾಯಿತು ಎನ್ನಲಾಗಿದೆ.

Exit mobile version