Site icon Vistara News

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

Veeraloka

ಬೆಂಗಳೂರು: ಇವತ್ತು ದಾಲ್ ತಡ್ಕ ರೇಟ್ ಜಾಸ್ತಿಯಾದರೆ (Veeraloka Books) ನಾವು ಯಾರನ್ನೂ ಕೇಳುವುದಿಲ್ಲ. ಸುಮ್ಮನೆ ಹೋಗಿ ಹಣ ಕೊಟ್ಟು ತಿಂದು ಬರುತ್ತೇವೆ. ಆದರೆ ಕನ್ನಡ ಪುಸ್ತಕಗಳಿಗೆ ದಾಲ್‌ ತಡ್ಕಾಗಿರುವಷ್ಟು ಬೇಡಿಕೆಯೂ ಇಲ್ಲ. ಮುಖಬೆಲೆ ಐದು ರೂಪಾಯಿ ಜಾಸ್ತಿಯಾದರೂ ಓದುಗ ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಇದೆ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ (jayant kaikini) ವಿಷಾದಿಸಿದರು. ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ವೀರಲೋಕ ಬುಕ್ಸ್ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಕಾಯ್ಕಿಣಿ ಅವರು ಹಾರೈಸಿದರು.

ವೀರಲೋಕ ಬುಕ್ಸ್ ಆಯೋಜಿಸಿದ್ದ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐದು ಕೃತಿಗಳ ಬಿಡುಗಡೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ರಾಧಾಕೃಷ್ಣ ಕಲ್ಚಾರ್‌ ಅವರ ‘ಕವಚ’ ಕಾದಂಬರಿ ವೀರಲೋಕದ ನೂರನೇ ಕೃತಿಯಾಗಿತ್ತು. ಡಾ. ಎಂ ವೆಂಕಟಸ್ವಾಮಿಯವರ ‘ಜಗತ್ತಿನ ಭೀಕರ ಯುದ್ಧಗಳು’, ನೌಶಾದ್ ಜನ್ನತ್ತ್ ಅವರ ‘ಬೇವಾಚ್’, ಸಂದ್ಯಾರಾಣಿಯವರ ‘ನಾತಿಚರಾಮಿ’, ಡಾ. ಶೈಲೇಶ್ ಕುಮಾರ್ ಅವರ ‘ಸುಪ್ತ ಸಾಗರದಾಚೆ’ ಇನ್ನಿತರ ಕೃತಿಗಳಾಗಿದ್ದವು.
ವೀರಲೋಕ ಬುಕ್ಸ್ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ್ ಅವರು ಆಶಯ ನುಡಿಗಳನ್ನಾಡಿದರು. ಎರಡು ವರ್ಷಗಳಲ್ಲಿನ ಏಳುಬೀಳುಗಳು, ಮೈಲುಗಲ್ಲುಗಳು, ಮುಂದಿನ ತಯಾರಿಗಳ ಬಗ್ಗೆ ವಿವರಿಸಿದರು.

ಇದೇ ವೇದಿಕೆಯಲ್ಲಿ ಅನಂತ ಕುಣಿಗಲ್ ಅವರು ಸಂಪಾದಿಸಿರುವ ವೀರಕಪುತ್ರ ಶ್ರೀನಿವಾಸ್ ಅವರ ಲಲಿತ ಪ್ರಬಂಧಗಳ ಸಂಕಲನ ‘ಬದುಕೇ ಥ್ಯಾಂಕ್ಯೂ’ ಕೃತಿಯೂ ಬಿಡುಗಡೆಯಾಯಿತು. ಕನ್ನಡ ಮಾಣಿಕ್ಯ ಮಾಸ ಪತ್ರಿಕೆಯ ದಶಮಾನೋತ್ಸವವನ್ನೂ ಆಚರಿಸಲಾಯಿತು. ವೀರಲೋಕದ ಐದು ಕೃತಿಗಳ ಮರುಮುದ್ರಣದ ಆವೃತ್ತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಹಿರಿಯ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್, ನಿರ್ದೇಶಕ ಮಂಸೋರೆ, ಸಂಭಾಷಣೆಕಾರ ಮಾಸ್ತಿ, ಮಹೇಶ ಅರಬಳ್ಳಿ, ಭಾರತಿ ಬಿ.ವಿ, ಪೂರ್ಣಿಮಾ ಮಾಳಗಿಮನಿ, ಶೋಭಾ ರಾವ್, ನವೀನ್ ಸಾಗರ್, ಮಂಡ್ಯ ರಮೇಶ್, ಜೋಗಿ, ಸಂತೋಷ್ ಹಾನಗಲ್, ದಿವ್ಯಾ ಆಲೂರು, ಹರಿವು ರತೀಶ್, ಕಾನ್ಕೇವ್ ನಂದೀಶ್, ಪ್ರಕಾಶ್ ಕಂಬತ್ತಳ್ಳಿ, ಷಡಕ್ಷರಿ, ವಿ ನಾಗೇಂದ್ರ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.

Exit mobile version