Site icon Vistara News

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುರುಕುಗೊಂಡ ಮತದಾನ; ಮುರ್ಶಿದಾಬಾದ್‌ನಲ್ಲಿ ಕಚ್ಚಾ ಬಾಂಬ್ ಸ್ಫೋಟ

ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ ಮತದಾನ ಬಿರುಸಿನಿಂದ ಸಾಗಿತ್ತು ಎರಡೂ ರಾಜ್ಯಗಳಲ್ಲಿ ಮತದಾನ ಶೇ.50 ದಾಟಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ
ತಮಿಳುನಾಡಿನಲ್ಲಿ ಶೇ.56.8 ರಷ್ಟು ಮತದಾನವಾಗಿದ್ದರೆ ಪಶ್ಚಿಮ ಬಂಗಾಳದಲ್ಲಿ ಶೇ. 62.2ರಷ್ಟು ಮತದಾನವಾಗಿದೆ.
ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ 152 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ತಮಿಳುನಾಡಿನಲ್ಲಿ, 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮುಖ್ಯವಾಗಿ ಡಿಎಂಕೆ ನೇತೃತ್ವದ ಮೈತ್ರಿ ಹಾಗೂ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ನಡುವಿನ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಐದು ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ನಟ ವಿಜಯ ಅವರ ಟಿವಿಕೆ ಪಕ್ಷ ಈ ಎರಡೂ ಪಕ್ಷಗಳಿಗೆ ಪೈಪೋಟಿ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಇಂದು ಮತದಾನ ನಡೆಯುತ್ತಿದೆ. ಉತ್ತರ ಬಂಗಾಳದ ಎಲ್ಲಾ 152 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಬಂಗಾಳದ ಮುರ್ಶಿದಾಬಾದ್‌, ಜರ್ಗಾಮ, ಮೇದಿನಿಪುರ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್‌ ಮತ್ತು ಬಿರ್ಬುಮ್‌ನಲ್ಲಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ 16 ಜಿಲ್ಲೆಗಳ 152 ಕ್ಷೇತ್ರಗಳಿದ್ದು, 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮುರ್ಶಿದಾಬಾದ್‌ನಲ್ಲಿ ಕಚ್ಚಾ ಬಾಂಬ್ ಎಸೆತ:
ಮುರ್ಶಿದಾಬಾದ್ ಜಿಲ್ಲೆಯ ನೋಯ್ಡಾದ ಶಿವನಗರದ ಪ್ರಾಥಮಿಕ ಶಾಲೆಯ ಹತ್ತಿರ ದುಷ್ಕರ್ಮಿಗಳು ಮತಕೇಂದ್ರದ ಬಳಿ ಕಚ್ಚಾ ಬಾಂಬ್ ಎಸೆದಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ನಮಾಜ್‌ ಮುಗಿಸಿ ಹೊರಬರುತ್ತಿದ್ದಂತೆ ಸ್ಫೋಟ ಸಂಭವಿಸಿದೆ. ಈ ಸಂದರ್ಭದಲ್ಲಿ ಟಿಎಂಸಿ ಅಭ್ಯರ್ಥಿ ಸಾಹಿನಾ ಮುಮ್ತಾಜ್ ಸಹ ಸಮೀಪದಲ್ಲೇ ಇದ್ದು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಘಟನೆ ಹಿಂದೆ ಹುಮಾಯುನ್ ಕಬೀರ್ ಅವರ ಎಜೆಯುಪಿ ಪಕ್ಷದ ಕಾರ್ಯಕರ್ತರ ಕೈವಾಡವಿದೆ ಎಂದು ಟಿಎಂಸಿ ಸಂಸದ ಅಬು ತಹೇರ್ ಖಾನ್ ಆರೋಪಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಮತ್ತು ಕೇಂದ್ರೀಯ ದಳಗಳನ್ನು ನಿಯೋಜಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಅಗರ್‌ ವಾಲ್ ತಿಳಿಸಿದ್ದಾರೆ.
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮತ ಎಣಿಕೆ ಮೇ 4ರಂದು ನಡೆಯಲಿದೆ. ಇದೇ ದಿನ ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಮತ ಎಣಿಕೆ ನಡೆಯಲಿದೆ.

Exit mobile version